ಬಯಲು ಶೌಚ ಮುಕ್ತ; ದೇಶದಲ್ಲಿ ಉಡುಪಿಗೆ 7ನೆ ಸ್ಥಾನ: ಜಿಲ್ಲಾಧಿಕಾರಿ
ಉಡುಪಿ, ಅ.2: ಗಾಂಧೀಜಿಯವರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸ್ವಚ್ಛ ಭಾರತದ ಕಲ್ಪನೆ ಗಾಂಧೀಜಿಯವರಿಗೆ ಮೊದಲೇ ಇತ್ತು. ಈ ವರ್ಷ ರಾಜ್ಯದ ಐದು ಜಿಲ್ಲೆಗಳು, 20 ತಾಲೂಕುಗಳು ಹಾಗೂ 1000 ಗ್ರಾಮಗಳು ಬಯಲು ಶೌಚ ಮುಕ್ತ ಎಂಬುದಾಗಿ ಘೋಷಣೆಯಾಗಿವೆ. ಇದರಲ್ಲಿ ಉಡುಪಿಯು ಇಡೀ ರಾಷ್ಟ್ರದಲ್ಲಿ ಏಳನೇ ಜಿಲ್ಲೆಯಾಗಿ ಮತ್ತು ರಾಜ್ಯದಲ್ಲಿ 5ಲಕ್ಷ ಜನಸಂಖ್ಯೆಯುಳ್ಳ ನಗರಗಳ ಪೈಕಿ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ರವಿವಾರ ಆಯೋಜಿಸಲಾದ ಗಾಂಧೀ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಗರಸಭೆಯ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ಗಾಂಧೀಜಿಯವರ ‘ನನ್ನ ಜೀವನ ನನ್ನ ಸಂದೇಶ’ ಕಿರು ಪುಸ್ತಕ ಹಾಗೂ ಗಾಂಧೀ ಜಯಂತಿ ಪ್ರಯಕ್ತ ವಿಶೇಷವಾಗಿ ಪ್ರಕಟಿಸಿದ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಮಾಸಿಕಗಳ ಬಿಡುಗಡೆ ಹಾಗೂ ಗಾಂಧೀ ಜಯಂತಿ ಪ್ರಯುಕ್ತ ವಿನ್ಯಾಸಗೊಳಿಸಿದ್ದ ವಿಶೇಷ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಸ್ವಾತಂತ್ರವಾದಿ ದಾಮೋದರ್, ನಗರಸಭೆ ಸದಸ್ಯರಾದ ನಾರಾ ಯಣ ಕುಂದರ್, ಹಸನ್ ಸಾಬ್, ಯುವರಾಜ್, ಜನಾರ್ದನ ಭಂಡಾರ್ ಕರ್, ಗೀತಾ ಶೇಟ್, ಮೀನು ಮಾರಾಟ ಪೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ತಹಶೀಲ್ದಾರ್ ಮಹೇಶ್ ಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಉಪಸ್ಥಿತರಿದ್ದರು.
ಪೌರಾಯುಕ್ತ ಡಿ.ಮಂಜುನಾಥಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ವಂದಿಸಿದರು.