ಗಾಂಧೀಜಿ ಜಗತ್ತಿಗೆ ದಾರಿ ತೋರಿದ ಬೆಳಕು: ಡಾ.ಮಹಾಬಲೇಶ್ವರ ರಾವ್

Update: 2016-10-02 11:37 GMT

ಉಡುಪಿ, ಅ.2: ಮಹಾತ್ಮ ಗಾಂಧೀಜಿ ಇಡೀ ಜಗತ್ತಿಗೆ ನಿರಂತರ ದಾರಿ ತೋರುವ ಬೆಳಕು ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಮಹಾವಿದ್ಯಾಲ ಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಕೌಟ್ಸ್ -ಗೈಡ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಆಯೋಜಿಸಲಾದ ಗಾಂಧಿ ಜಯಂತಿ ಆಚರಣೆಯಲ್ಲಿ ಗಾಂಧಿ ಮತ್ತು ಸೇವೆ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಗಾಂಧೀಜಿ ತಮ್ಮ ಬಳಿ ಬಂದವರಿಗೆ ಬಡವ ಶ್ರೀಮಂತ, ಜಾತಿ ಬೇಧ ವಿಲ್ಲದೇ ಪ್ರತಿಯೊಬ್ಬರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಅವರಿಗೆ ಪರಿಹಾರ ಸೂಚಿಸುತ್ತಿದ್ದರು. ಜಗತ್ತಿನಲ್ಲಿ ಈ ರೀತಿಯಾಗಿ ಪ್ರತಿಯೊಬ್ಬರಿಗೆ ಸ್ಪಂದಿಸಿದ ವ್ಯಕ್ತಿ ಮತ್ತೊಬ್ಬರಿಲ್ಲ. ಸತ್ಯ ಮತ್ತು ಅಹಿಂಸೆ ಗಾಂಧೀಜಿಯ ತಾರಕ ಮಂತ್ರ. ಇಡೀ ಜಗತ್ತಿಗೆ ಅದರ ಶಕ್ತಿಯನ್ನು ಗಾಂಧೀಜಿ ತೋರಿಸಿ ಕೊಟ್ಟರು. ಗಾಂಧೀಜಿ ತಮ್ಮ ತತ್ವಗಳಿಗೆ ವಿರುದ್ದವಾಗಿ ನಡೆದುಕೊಂಡಾಗ ತಮಗೇ ತಾವೇ ಉಪವಾಸದ ಮೂಲಕ ಶಿಕ್ಷೆಯನ್ನು ನೀಡುತ್ತಿದ್ದರು ಎಂದರು.

ಯಾವುದೇ ಧರ್ಮ ಅಥವಾ ವ್ಯಕ್ತಿಯನ್ನು ವಿರೋಧಿಸದ ಗಾಂದೀಜಿ, ತಮ್ಮ ಆಶ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಆರಂಭಿಸಿದ್ದರು, ಅನ್ಯಾಯದ ಆಜ್ಞೆಗಳು ಪಾಲಿಸಲು ಯೋಗ್ಯವಲ್ಲ ಎಂದು ನಂಬಿದ್ದ ಗಾಂಧೀಜಿ ಸರಳ ಜೀವನಕ್ಕೆ ಆದ್ಯತೆ ನೀಡಿದ್ದರು. ತ್ರಿಕರ್ಣ ಪರಿಶುಧ್ದರಾಗಿ ಜೀವನ ನಡೆಸಿದ ಅವರು, ಪ್ರಕೃತಿಯಲ್ಲಿನ ಸಂಪನ್ಮೂಲಗಳನ್ನೂ ಸಹ ಮಿತವಾಗಿ ಬಳಸುವಂತೆ ತಿಳಿಸಿದ್ದರು ಎಂದು ಡಾ.ಮಹಾಬಲೇಶ್ವರ ರಾವ್ ತಿಳಿಸಿದರು.

ಹಿರಿಯ ಸ್ವಾತಂತ್ರ್ಯವಾದಿ ದಾಮೋದರ್, ಹರಿಣಿ ದಾಮೋದರ್, ಸ್ಕೌಟ್ ಮತ್ತು ಗೈಡ್‌ನ ನಿತಿನ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಂಗಪ್ಪವಂದಿಸಿದರು. ನಂತರ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ, ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News