ಅಹಿಂಸೆ ಪ್ರಬಲರ ಅಸ್ತ್ರ, ಹಿಂಸೆ ದುರ್ಬಲರ ಸಾಧನ: ಸುಮಾ

Update: 2016-10-02 11:42 GMT

ಉಡುಪಿ, ಅ.2: ಅಹಿಂಸೆ ಎನ್ನವದು ಪ್ರಬಲರು ಉಪಯೋಗಿಸುವ ಅಸ್ತ್ರ. ಮಹಾತ್ಮ ಗಾಂಧೀಜಿ ಈ ಅಸ್ತ್ರವನ್ನು ಉಪಯೋಗಿಸಿಯೇ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರ ತಂದು ಕೊಟ್ಟರು. ಆದರೆ ನಾವು ಇಂದು ಅಹಿಂಸಾ ಮಾರ್ಗ ಮರೆತು ಹಿಂಸಾ ಪ್ರವೃತ್ತಿಯನ್ನು ಬೆಳೆಸಿ ಕೊಳ್ಳುತ್ತಿದ್ದೇವೆ, ಹಿಂಸೆ ಎನ್ನುದು ದುರ್ಬಲರ ಸಾಧನ. ತಮ್ಮ ಗುರಿ ಸಾದನೆಗಾಗಿ ಇದನ್ನು ಬಳಸಿ ಕೊಳ್ಳುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನ ಕೆಡಿಸುತ್ತಿದ್ದಾರೆ ಎಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ, ಚಿಂತಕಿ ಸುಮಾ ಎಸ್. ಹೇಳಿದ್ದಾರೆ.

ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜರಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ದರು. ಗಾಂಧೀಜಿ ಸತ್ಯ ಸಮಾನತೆಯನ್ನು ಕ್ರಿಯಾತ್ಮಕಗೊಳಿಸಿ ಶತಮಾನ ಸಂದರೂ ನಾವು ಇಂದು ಕೂಡಾ ಸಮಾನತೆಗಾಗಿ ಹೋರಾಟ ಮಾಡುತ್ತ ಇದ್ದೇವೆ. ಜಾತಿ, ಧರ್ಮಗಳ ಗೋಡೆ ಕಟ್ಟಿ ಕೊಂಡು ದ್ವೀಪಗಳಾಗುತ್ತಿದ್ದೇವೆ. ದಲಿತರಿಗೆ ಕಾನೂನಾತ್ಮಕವಾಗಿ ಸಮಾನತೆ ದೊರೆತರೂ ಅದು ಜಾರಿಯಾಗು ವಲ್ಲಿ ತೊಡಕುಗಳಾಗುತ್ತಿವೆ ಎಂದು ಅವರು ತಿಳಿಸಿದರು.

ನಮ್ಮ ಎದುರು ಇಂದು ಎರಡು ಮಾದರಿಗಳು ಇವೆ. ಒಂದು ಹಿಟ್ಲರ್ ಇನ್ನೊಂದು ಗಾಂಧಿ. ಇಬ್ಬರನ್ನು ಕೂಡಾ ಚರಿತ್ರೆ ನೆನಪಿಸಿಕೊಳ್ಳುತ್ತವೆ. ಒಬ್ಬರು ಸರ್ವಾಧಿಕಾರ ಮತ್ತು ತಾನು ಮಾಡಿದ ಹಿಂಸೆಯ ಮೂಲಕ ಚರಿತ್ರೆಯಲ್ಲಿ ಸ್ಥಾನ ಗಿಟ್ಟಿಸಿ ಕೊಂಡರೆ, ಇನ್ನೊಬ್ಬರು ಸತ್ಯದ, ಸಮಾನತೆ, ಅಹಿಂಸೆಯ ಮೂಲಕ ಸ್ಥಾನ ಪಡೆದು ಕೊಂಡರು. ನಾವು ಯಾವ ಮಾದರಿಯನ್ನು ಆಯ್ಕೆ ಮಾಡಿ ಕೊಳ್ಳಬೇಕು ಎಂದು ನಮ್ಮ ವಿವೇಚನೆಗೆ ಬಿಟ್ಟಿದ್ದು ಎಂದರು.

ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ಉದ್ಯಾವರ ನಾಗೇಶ ಕುಮಾರ್ ವಹಿಸಿದ್ದರು. ಉದ್ಯಾವರ ಗ್ರಾಪಂ ಉಪಾದ್ಯಕ್ಷ ರಿಯಾಝ್ ಪಳ್ಳಿ, ಶಾಲಾಭಿವೃಧ್ಧಿ ಸಮಿತಿಯ ಸದಸ್ಯರಾದ ಪ್ರತಾಪ್ ಕುಮಾರ್ ಉದ್ಯಾವರ, ಲೋರೆನ್ಸ್ ಡೇಸಾ, ಪಿಟಿಎ ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು.

ಪ್ರಾಂಶುಪಾಲ ಮಹೇಂದ್ರ ಶರ್ಮ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಮುಕಾಂಬೆ ವಂದಿಸಿದರು. ಉಪನ್ಯಾಸಕಿ ಶಾಂತಿ ಡಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News