ಗಾಂಧಿ ಪ್ರಜ್ಞೆಯಿಂದ ಯಶಸ್ವಿ ಜೀವನ ಸಾಧ್ಯ: ಮಂಜುನಾಥ ರಾವ್
ಉಡುಪಿ, ಅ.2: ಪರಿಸರ, ಆರೋಗ್ಯ, ವೈದ್ಯ, ಹಾಸ್ಯ ಹಾಗೂ ಗಾಂಧಿ ಪ್ರಜ್ಞೆ ಬೆಳೆಸಿಕೊಂಡರೆ ಯಶಸ್ವಿ ಜೀವನ ನಡೆಸಲು ಸಾಧ್ಯ. ಗಾಂಧಿಯ ಸತ್ಯ, ಅಹಿಂಸೆ, ಪ್ರಾಮಾಣಿಕತೆಯನ್ನು ಪ್ರತಿಯೊಬ್ಬರ ಬದುಕಿನಲ್ಲಿಯೂ ಅಳವಡಿ ಸುವ ಕಾರ್ಯ ಆಗಬೇಕು. ಪ್ರತಿಯೊಬ್ಬರಲ್ಲಿ ಗಾಂಧಿ ಇದ್ದಾರೆ. ಆದರೆ ನಮ್ಮಲ್ಲಿ ರುವ ಸ್ವಾರ್ಥ, ವೈರತ್ವ ಅದು ಮೂಡಿ ಬರದಂತೆ ಮಾಡುತ್ತಿದೆ ಎಂದು ಗಾಂಧಿ ವಿಚಾರ ಚಿಂತಕ ಹಾಗೂ ಲೇಖಕ ಆರೂರು ಮಂಜುನಾಥ ರಾವ್ ಹೇಳಿದ್ದಾರೆ.
ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ರವಿವಾರ ಆಯೋಜಿಸಲಾದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಪ್ರಜ್ಞೆಯಲ್ಲಿ ಗಾಂಧಿಗಿಂತ ದೊಡ್ಡ ವ್ಯಕ್ತಿ ಇನ್ನೊಬ್ಬರಿಲ್ಲ. ಅವರು ಮಾನವೀ ಯತೆಯ ಪ್ರಜ್ಞೆಯನ್ನು ಮೂಡಿಸಿ ಇಡೀ ಜಗತ್ತಿಗೆ ಮಾದರಿಯಾಗಿ ಬದುಕಿದ ವ್ಯಕ್ತಿ. ಹಾಗಾಗಿ ಗಾಂಧಿ ಹತ್ಯೆಯು ಮಾನವೀಯತೆಯ ಕಗ್ಗೊಲೆಯಾಗಿದೆ. ಗಾಂಧಿಯ ತತ್ವವನ್ನು ಒಪ್ಪಿಕೊಂಡು ಬದುಕುವುದೇ ಸಾರ್ಥಕ ಜೀವನ ಎಂದು ಅವರು ಹೇಳಿದರು.
ಗಾಂಧೀಜಿಯ ಬಗ್ಗೆ ಪ್ರಚಾರ ಮಾಡಲು ಸರಕಾರ ಸಾಕಷ್ಟು ಖರ್ಚು ಮಾಡುತ್ತದೆ. ಆದರೆ ಗಾಂಧಿಯ ವಿಚಾರಧಾರೆಗಳು ಮಕ್ಕಳ ಮಸ್ತಕದಲ್ಲಿ ಉಳಿಯುವಂತಹ ಪ್ರಯತ್ನ ಎಲ್ಲೂ ನಡೆಯುತ್ತಿಲ್ಲ. ಖರ್ಚು ಮಾಡುವುದು ಮಾತ್ರ ನಮ್ಮ ಕರ್ತವ್ಯ ಎಂಬಂತಾಗಿದೆ ಎಂದು ಅವರು ಖೇಧ ವ್ಯಕ್ತಪಡಿಸಿ ದರು.
ದೇಶದ ಜನತೆಯ ಗಾಂಧಿ ತತ್ವವನ್ನು ಅನುಸರಿಸಿದಲ್ಲಿ ಭಯೋತ್ಪಾದನೆ, ಜಾತಿ ತಾರತಮ್ಯ ಸೇರಿದಂತೆ ಎಲ್ಲ ರೀತಿಯ ಶೋಷಣೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಸಾರ್ವಕಾಲಿಕ ಪ್ರಸ್ತುತವಾಗಿರುವ ಗಾಂಧಿ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಕೆ. ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು.
ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ ವಂದಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಕಾಲೇಜಿನ ವಿದ್ಯಾರ್ಥಿಗಳಿಂದ ರಾಮಧುನ್ ನಡೆಯಿತು.