ಮದ್ರಸ, ಮಸೀದಿಗಳಲ್ಲಿ ಶಿಕ್ಷಣ-ಧಾರ್ಮಿಕ ಉಪನ್ಯಾಸ ಬ್ಯಾರಿ ಭಾಷೆಯಲ್ಲೇ ಇರಲಿ

Update: 2016-10-03 07:58 GMT

ಮಂಗಳೂರು, ಅ.3: ಜಿಲ್ಲೆಯಲ್ಲಿರುವ ಮದ್ರಸಗಳಲ್ಲಿ ಮತ್ತು ಮಸೀದಿಗಳಲ್ಲಿ ಶಿಕ್ಷಣ ಮತ್ತು ಧಾರ್ಮಿಕ ಉಪನ್ಯಾಸವನ್ನು ಬ್ಯಾರಿ ಭಾಷೆಯಲ್ಲೇ ನೀಡುವ ಮೂಲಕ ಬ್ಯಾರಿ ಭಾಷೆಯ ಅಭಿವೃದ್ಧಿಗೆ ಪ್ರಯತ್ನಗಳಾಗಬೇಕು ಎಂದು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ಆರ್.ರಶೀದ್ ಹಾಜಿ ಅಭಿಪ್ರಾಯಿಸಿದರು.
 ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ನಗರದ ಅತ್ತಾವರದಲ್ಲಿರುವ ಕಚೇರಿಯಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆ ಹಾಗೂ ಭಾಷಾ ಸಪ್ತಾಹ, ಪ್ರಚಾರ ಆಂದೋಲನ, ಪುಸ್ತಕ ಮಾರಾಟ ಜಾಥಾಕ್ಕೆ ಚಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದರು.
   ಮದ್ರಸಗಳಲ್ಲಿ ಮತ್ತು ಮಸೀದಿಗಳಲ್ಲಿ ಶಿಕ್ಷಣ ಮತ್ತು ಧಾರ್ಮಿಕ ಉಪನ್ಯಾಸವನ್ನು ಮಲಯಾಳಂ ಬದಲಿಗೆ ಬ್ಯಾರಿ ಭಾಷೆಯಲ್ಲೇ ನೀಡುವ ನಿಟ್ಟಿನಲ್ಲಿ ಈ ಹಿಂದೆಯೂ ಪ್ರಯತ್ನಪಡಲಾಗಿದ್ದು, ಇನ್ನು ಮುಂದೆಯೂ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರದಿಂದ ಸಿಗುವಂತಹ ಸಾಕಷ್ಟು ಯೋಜನೆಗಳ ಪ್ರಚಾರ ಮಾಡಬೇಕಾಗಿದೆ. ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಇರುವ ಹಲವು ಯೋಜನೆಗಳ ಮಾಹಿತಿಯನ್ನು ಬ್ಯಾರಿ ಅಕಾಡಮಿಯ ಮೂಲಕ ನೀಡುವಂತಹ ಪ್ರಯತ್ನವನ್ನು ಮಾಡಬೇಕಾಗಿದೆ ಎಂದರು.
   ಸಮುದಾಯದ ಕೆಲವು ಯುವಕರು ಡ್ರಗ್ಸ್ ಜಾಲಕ್ಕೆ ಬಲಿಯಾಗುತ್ತಿದ್ದು ಇವರನ್ನು ಒಳ್ಳೆಯವರೊಂದಿಗೆ ಸೇರುವಂತೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾರಿ ಪುಸ್ತಕ ಮಾರಾಟ ವಾಹನ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಅವರು, ಬ್ಯಾರಿ ಸಮುದಾಯವು ಮಹಿಳೆಯರಿಗೆ ಅಪಾರ ಗೌರವ ಕೊಡುವ ಜನಾಂಗವಾಗಿದೆ ಎಂದು ಹೇಳಿದರು.
 ಭಾಷಾ ಪ್ರಚಾರ ಆಂದೋಲನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಭಾಷೆಯ ಅಭಿವೃದ್ಧಿಯಲ್ಲಿ ಸಾಹಿತ್ಯ, ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಬ್ಯಾರಿ ಭಾಷೆಯನ್ನು ಮುಂದಿನ ಜನಾಂಗಕ್ಕೂ ಉಳಿಸಿಕೊಂಡು ಹೋಗುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಎ.ವಿ.ನಾವಡ, ಜಾಗತೀಕರಣದ ಪ್ರಭಾವದಿಂದ ದೇಶಿಯ ಭಾಷೆಗಳು ಮಂಕಾಗತೊಡಗಿವೆ. ಈ ಹಿನ್ನೆಲೆಯಲ್ಲಿ ಸಣ್ಣಸಣ್ಣ ಭಾಷೆಗಳು ತಮ್ಮೆಳಗೆ ಸೌಹಾರ್ದವನ್ನು, ಪರಸ್ಪರ ಸಂಬಂಧಗಳನ್ನು ಇಟ್ಟುಕೊಂಡು ಭಾಷೆಯನ್ನು ಉಳಿಸಬೇಕಾಗಿದೆ ಎಂದರು.
 ಬ್ಯಾರಿ-ಕನ್ನಡ-ಇಂಗ್ಲೀಷ್ ನಿಘಂಟು ಸಂಪಾದಕ ಪ್ರೊ.ಬಿ.ಎಂ.ಇಚ್ಲಂಗೋಡು ಮಾತನಾಡಿ, ತುಳು, ಕೊಂಕಣಿ ಮಾತನಾಡುವ ಎಲ್ಲರೂ ಒಟ್ಟಾಗಿದ್ದಾರೆ. ಆದರೆ ಬ್ಯಾರಿ ಭಾಷೆಯಲ್ಲಿ ಈ ಪ್ರಯತ್ನವಾಗಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದು ಹೇಳಿದರು.
 ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯ ಮುಹಮ್ಮದ್ ಝಕರಿಯ ಕಲ್ಲಡ್ಕ ವಂದಿಸಿದರು. ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News