ಬೆಂಗಳೂರಿನ ಲ್ಯಾಬ್‌ಗೆ ಮೀನಿನ ಮಾದರಿ ರವಾನೆ
ಬಂಟ್ವಾಳ, ಅ.3: ಮೂರು ದಿನಗಳ ಹಿಂದೆ ‘ಅಮುರು’ ಎಂಬ ಮೀನಿನ ತಲೆ ಮಾಂಸ ತಿಂದು ಅಸ್ವಸ್ಥರಾದ ಗೋಳ್ತಮಜಲಿನ ಒಂದೇ ಕುಟುಂಬದ ನಾಲ್ವರು ಇನ್ನೂ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮೀನು ಮಾಂಸ ಸೇವಿಸಿ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ವಿವಿಧೆಡೆ ಹಲವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮೀನಿನ ಮಾದರಿಯನ್ನು ಮಂಗಳೂರಿನ ಧಕ್ಕೆಯಿಂದ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಖಚಿತ ಕಾರಣ ಏನೆಂದು ತಿಳಿದು ಬರಲಿದೆ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಗಣೇಶ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ತುಂಬೆ, ಅಗ್ರಾರ್, ಮೊಡಂಕಾಪು, ಕಾರಾಜೆ, ನಂದಾವರ, ಬಂಟ್ವಾಳ ಸೇರಿದಂತೆ 30ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಪೈಕಿ ಕೆಲವರು ಇನ್ನೂ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯ ಭಾಷೆಯಲ್ಲಿ ‘ಅಮುರು’, ‘ಚೆಂಬೇರಿ’ ಎಂದು ಕರೆಯಲ್ಪಡುವ ‘ಹಾಮೋರ್’ ಜಾತಿಗೆ ಸೇರಿದ ಈ ಮೀನಿನ ತಲೆ ಮಾಂಸ ತಿಂದು ಈ ಪರಿಸ್ಥಿತಿ ಎದುರಾಗಿದೆ. ವಿದೇಶದಲ್ಲಿ ಭಾರೀ ಬೇಡಿಕೆ ಇರುವ ಈ ಮೀನು ಸುಮಾರು 20ರಿಂದ 25 ಕೆಜಿ ತೂಗುತ್ತದೆ. ಈ ಮೀನಿನ ದೇಹ ಭಾಗದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಅದರ ತಲೆ ಭಾಗವನ್ನು ಇಲ್ಲಿಯೇ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಇದರ ತಲೆ ಮಾಂಸದಿಂದ ಸ್ವಾದಿಷ್ಟ ಪದಾರ್ಥ ತಯಾರಿಸಬಹುದಾಗಿದ್ದು, ಹಾಗಾಗಿ ತಲೆ ಮಾಂಸಕ್ಕೆ ಕರಾವಳಿ ಭಾಗದಲ್ಲಿ ಭಾರೀ ಬೇಡಿಕೆಯಿದೆ. ಶನಿವಾರದಂದು ಮೀನಿನ ತಲೆ ಮಾಂಸ ತಿಂದು ದ.ಕ., ಉಡುಪಿ ಜಿಲ್ಲಾದ್ಯಂತ ನೂರಾರು ಜನರು ಅಸ್ವಸ್ಥರಾಗಿದ್ದರು. ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮತ್ತು ಉಳ್ಳಾಲದ ಕೋಡಿಯ ಮೀನು ರಫ್ತು ಫ್ಯಾಕ್ಟರಿಯಿಂದ ಈ ಮೀನಿನ ತಲೆ ಮಾರುಕಟ್ಟೆಗೆ ಬಂದಿದೆ ಎನ್ನಲಾಗಿದೆ. ಈ ಫ್ಯಾಕ್ಟರಿಗಳ ಕಾರ್ಮಿಕರು ಕೂಡ ಶುಕ್ರವಾರ ರಾತ್ರಿ ಊಟಕ್ಕೆ ಈ ಮೀನಿನ ಪದಾರ್ಥ ಸೇವಿಸಿದ್ದು, ಪರಿಣಾಮ 50ಕ್ಕೂ ಅಧಿಕ ಮಂದಿ ಕಾರ್ಮಿಕರು ಅಸ್ವಸ್ಥಗೊಂಡು ದೇರಕಟ್ಟೆ, ಉಳ್ಳಾಲ, ತೊಕ್ಕೊಟ್ಟು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಮೀನಿನ ತಲೆ ಭಾಗದ ಮಾಂಸ ಸೇವಿಸಿದವರಿಗೆ ವಾಂತಿ, ಭೇದಿ, ನಿಲ್ಲಲು ಸಾಧ್ಯವಾಗದಷ್ಟು ಕೈಕಾಲು ಸೆಳೆತ, ಕುಳಿತುಕೊಳ್ಳಲು ಸಾಧ್ಯವಾಗದಂತದ ಸೊಂಟದ ಭಾಗದಲ್ಲಿ ನೋವು, ತಲೆ ತಿರುಗುವುದು, ಮೈಚರ್ಮ ಸ್ವಲ್ಪ ಸ್ವಲ್ಪವೇ ನೇರಳೆ ಬಣ್ಣಕ್ಕೆ ತಿರುಗಿದೆ. ಅಲ್ಲದೆ ಉಸಿರಾಟ ತೊಂದರೆ, ನಾಲಗೆ ಹಿಡಿದಂತಾಗಿ ಮಾತನಾಡಲು ಕಷ್ಟವಾಗುವ ಪರಿಸ್ಥಿತಿ ಹಾಗೂ ಮೈ, ಅಂಗೈ ಮತ್ತು ಕಾಲಡಿ ತುರಿಕೆ ಕಂಡು ಬಂದಿದೆ ಎನ್ನಲಾಗಿದೆ. * ಇನ್ನೂ ಆಸ್ಪತ್ರೆಯಲ್ಲಿ: ಮೀನಿನ ಪದಾರ್ಥ ಸೇವಿಸಿರುವ ಬಂಟ್ವಾಳ ತಾಲೂಕಿನ ಗೋಳ್ತಮಜಲು ನಿವಾಸಿ ಕಲ್ಲಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನು ಅವರು ಚೇತರಿಸಿಕೊಂಡಿಲ್ಲ ಎಂದವರ ಕುಟುಂಬಸ್ಥರು ತಿಳಿಸಿದ್ದಾರೆ.
ತುಂಬೆಯ ಒಂದೇ ಕುಟುಂಬ ದವರಾದ ಖೈರುನ್ನಿಸಾ, ತಾಹಿರಾ, ಝಹುರಾ, ಇಕ್ಬಾಲ್, ಮುಷರ್ರಫ್, ಘನಿ, ನಝೀಮಾ ಎಂಬವರು ಅಸ್ವಸ್ಥಗೊಂಡಿದ್ದು, ಇವರಲ್ಲಿ ಇಬ್ಬರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದವರು ಚಿಕಿತ್ಸೆಯ ಬಳಿಕ ಚೇತರಿಸಿದ್ದು, ಮನೆಗೆ ತೆರಳಿದ್ದಾರೆ.
ಕ್ರಮಕ್ಕೆ ಸಚಿವ ಖಾದರ್ ಸೂಚನೆ
ಉಳ್ಳಾಲ, ಹರೇಕಳ, ಬಂಟ್ವಾಳ ತಾಲೂಕಿನ ಕೆಲವೆಡೆ ಮೀನಿನ ತಲೆ ತಿಂದು ಹಲವರು ಅಸ್ವಸ್ಥರಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಆಹಾರ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಇಂತಹ ಪ್ರಕರಣಗಳು ಯಾರ ನಿರ್ಲಕ್ಷಗಳಿಂದ ಆಗಿವೆ ಮತ್ತು ಕಾರಣಗಳೇನು ಎಂಬುದರ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಮುಂಜಾಗರೂಕತೆ ವಹಿಸಬೇಕಿದೆ. ಈ ಎಲ್ಲ ಅಂಶಗಳ ಬಗ್ಗೆ ಮೀನುಗಾರಿಕಾ ಇಲಾಖೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಸಭೆಯನ್ನು ಕೂಡಲೇ ಕರೆಯುವಂತೆ ಸಚಿವರು ಸೂಚಿಸಿದ್ದಾರೆ.
ಜನಸಾಮಾನ್ಯರು ಈ ಘಟನೆಯ ಬಗ್ಗೆ ಸಂಶಯ ನಿವಾರಣೆ ಆಗುವವರೆಗೆ ಮೀನಿನ ತಲೆ ತಿನ್ನಬೇಡಿ. ಕಳೆದ 3-4 ದಿನಗಳಲ್ಲಿ ಸುಮಾರು 150ಕ್ಕೂ ಅಧಿಕ ಮಂದಿ ಮೀನಿನ ತಲೆ ತಿಂದು ಅಸ್ವಸ್ಥರಾಗಿದ್ದು, ಇವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. 9 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಇವರ ಚಿಕಿತ್ಸೆಯ ಮೇಲುಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಅಸ್ವಸ್ಥಗೊಂಡ ಬೆಕ್ಕುಗಳು..!
ಮೀನಿನ ತಲೆ ಭಾಗದ ಮಾಂಸ ತಿಂದು ಮಂಗಳೂರು ತಾಲೂಕಿನ ಹರೇಕಳ ಎಂಬಲ್ಲಿ ಬೆಕ್ಕುಗಳು ಸಹ ಅಸ್ವಸ್ಥಗೊಂಡು ನಡೆದಾಡಲಾಗದ ಸ್ಥಿತಿ ತಲುಪಿವೆ ಎನ್ನಲಾಗಿದೆ.
ಮಂಗಳೂರು ಸುತ್ತ ಮುತ್ತಲಿರುವ ಮೀನು ರಪ್ತು ಫ್ಯಾಕ್ಟರಿಗಳು ಮೀನಿನ ದೇಹ ಭಾಗದ ಮಾಂಸವನ್ನು ಮಾತ್ರ ವಿದೇಶಕ್ಕೆ ರಪ್ತು ಮಾಡಿ ಅದರ ತಲೆ ಭಾಗವನ್ನು ಮಂಗಳೂರಿನ ದಕ್ಕೆಯಲ್ಲಿ ಮಾರಾಟಕ್ಕೆ ಸಾಗಿಸುತ್ತದೆ. ಈ ಮೀನಿನ ತಲೆ ಕೆಡದಂತೆ ರಾಸಾಯನಿಕ ಸಿಂಪಡಿಸುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸ್ವಸ್ಥಗೊಂಡ ಕುಟುಂಬಸ್ಥರು ಆರೋಪಿಸಿದರೆ, ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಹೆಚ್ಚಿನ ಮೀನಿನ ಬೇಟೆಗಾಗಿ ಪಾದರಸವನ್ನು ಸಿಂಪಡಿಸಲಾಗುತ್ತದೆ. ಪಾದರಸ ತಿಂದ ಮೀನಿನ ಪದಾರ್ಥ ಸೇವಿಸಿದವರು ಅಸ್ವಸ್ಥರಾಗಿರುವ ಸಾಧ್ಯತೆ ಇದೆ ಎಂದು ಇನ್ನೂ ಕೆಲವರು ಆರೋಪಿಸಿದ್ದಾರೆ.