ರಿವಾಲ್ವರ್ ತೋರಿಸಿ ಕಟೀಲು ದೇವಳದ ಅರ್ಚಕರ ಮನೆಯಿಂದ ದರೋಡೆ
ಮುಲ್ಕಿ, ಅ.4: ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಗೆ ನುಗ್ಗಿದ ದರೋಡೆಕೋರರ ತಂಡ ಮಾರಕಾಸ್ತ್ರಗಳಿಂದ ಮನೆ ಮಂದಿಯನ್ನು ಬೆದರಿಸಿ ಹಲ್ಲೆ ನಡೆಸಿ ಲಕ್ಷಾಂತರ ರೂ. ಬೆಲೆ ಬಾಳುವ ಸುಮಾರು 82 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ದೋಚಿರುವ ಘಟನೆ ಸೋಮವಾರ ತಡ ರಾತ್ರಿ ಕಟೀಲು ಗಿಡಿಗೆರೆ ಎಂಬಲ್ಲಿ ನಡೆದಿದೆ.
ಕಟೀಲು ದೇವಳದಲ್ಲಿ ನವರಾತ್ರಿಯ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ತಡರಾತ್ರಿ ಮುಗಿಸಿಕೊಂಡು ರಾತ್ರಿ 12 ಗಂಟೆ ಸುಮಾರಿಗೆ ಗಿಡಿಗೆರೆ ಶೇಡಿಗುರಿ ಬಳಿಯ ಮನೆಯಲ್ಲಿ ಮಲಗಿದ್ದ ಕುಟುಂಬವನ್ನು ಎಚ್ಚರಿಸಿದ ದರೋಡೆಕೋರರು ನಮ್ಮವರೊಬ್ಬರಿಗೆ ಅನಾರೋಗ್ಯ ಕಾಡುತ್ತಿದ್ದು ಅದಕ್ಕಾಗಿ ಆಸ್ರಣ್ಣರ ಬಳಿ ಪ್ರಸಾದ ಸ್ವೀಕರಿಸಲು ಬಂದಿರುವುದಾಗಿ ಹೇಳಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದರು. ಆದರೆ ಹೆದರಿದ್ದ ಮನೆಮಂದಿ ಬಾಗಿಲು ತೆರೆಯಲು ಹಿಂದೇಟು ಹಾಕಿದ್ದರು. ಆದಾಗಲೇ ಶಸ್ತ್ರಸಜ್ಜಿತರಾಗಿ ಬಂದಿದ್ದ ಸುಮಾರು 6 ಮಂದಿ ದರೋಡೆ ಕೋರರು ಬಾಗಿಲು ಮುರಿದು ಒಳ ಪ್ರವೇಶಿಸಿದ್ದರು. ಅದೇ ಸಮಯಕ್ಕೆ ಮನೆಯ ಮಾಳಿಗೆ ಮೂಲಕ ಇಬ್ಬರು ದರೋಡೆಕೋರರು ನುಸುಳಿ ಮಾರಕಾಯುಧಗಳನ್ನು ತೋರಿಸಿ ಬೆದರಿಸಿದ್ದರು.
ಇದನ್ನು ಕಂಡ ವಾಸುದೇವ ಅಸ್ರಣ್ಣ ಅವರ ಪುತ್ರ ಕುಮಾರ ಆಸ್ರಣ್ಣ ಅವರು ತಮ್ಮ ಅಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಲು ಯತ್ನಿಸಿದಾಗ ಬಂದೂಕು ತೋರಿಸಿ ಬೆದರಿಸಿ ಮೊಬೈಲ್ ಕೆಳಗೆ ಹಾಕುವಂತೆ ಬೆದರಿಸಿದ್ದರು. ಬಳಿಕ ಹಲ್ಲೆ ನಡೆಸಿ ಬೆದರಿಸಿ ಮನೆಯ ಕಪಾಟುಗಳಲ್ಲಿ ಇರಿಸಿದ್ದ ಸುಮಾರು 82 ಪವನ್ ಚಿನ್ನಾಭರಣ, ಹೆಂಗಸರ ಮೇಲಿದ್ದ ಚಿನ್ನಾಭರಣ ಹಾಗೂ ಸುಮಾರು 50 ಸಾವಿರ ರೂ. ನಗದು ಲೂಟಿ ಮಾಡಿ ಮನೆ ಮಂದಿಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ವಾಸುದೇವ ಆಸ್ರಣ್ಣರ ತಮ್ಮ ವೆಂಕಟ್ರಮಣ ಆಸ್ರಣ್ಣ ವಾಸುದೇವ ಆಸ್ರಣ್ಣರ ಮನೆಗೆ ಧಾವಿಸಿ ಬಾಗಿಲು ತೆರೆದು ಕೋಣೆಯಲ್ಲಿದ್ದವರನ್ನು ಬಿಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯವರ ಚಲನವಲನಗಳನ್ನು ಮೊದಲೇ ತಿಳಿದು ಕೊಂಡು ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದ್ದು, ಸಿನಿಮೀಯ ಮಾದರಿಯಲ್ಲಿ ನಡೆದ ಈ ದರೋಡೆ ಪ್ರಕರಣ ಕಟೀಲು ಸಹಿತ ಸುತ್ತ ಮುತ್ತಲಿನ ಜನತೆಯಲ್ಲಿ ಭಯಬೀತರನ್ನಾಗಿಸಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ರೇಖಾಚಿತ್ರಗಾರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಂಡದಲ್ಲಿ ಒಬ್ಬ ಮುಸುಕುಧಾರಿ ಕಳ್ಳ
ಆಸ್ರಣ್ಣರ ಮನೆ ದರೋಡೆಯಲ್ಲಿ 8 ಮಂದಿ ಕಳ್ಳರು ಇದ್ದರು. ಆದರೆ, ಅವರಲ್ಲಿ ಒಬ್ಬ ಮಾತ್ರ ಮುಖಕ್ಕೆ ಮುಸುಕು ಹಾಕಿಕೊಂಡು ಮುಖ ಮುಚ್ಚಿಕೊಂಡಿದ್ದ ಎಂದಿರುವ ಮನೆ ಮಂದಿ, ಈತ ಸ್ಥಳೀಯನಾಗಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
3 ಮೊಬೈಲ್ ಫೊನ್‌ಗಳು, 1 ಟ್ಯಾಬ್ ಅಪಹರಿಸಿದ ಖದೀಮರು, 1 ಮೊಬೈಲನ್ನು ಮನೆಯ ಹಿಂಭಾಗದಲ್ಲಿ ಎಸೆದು ಹೋಗಿದ್ದರು. ಶ್ವಾನದಳದ ಕಾರ್ಯಾಚರಣೆಯ ವೇಳೆ ಈ ಮೊಬೈಲ್ ದೊರೆತಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆಸ್ರಣ್ಣರ ಮನೆ ದರೋಡೆ ನಡೆಸಿದ ಕಳ್ಳರು ಅರ್ಧಂಬರ್ಧ ಹಿಂದಿ ಹಾಗೂ ತುಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಕುಮಾರ ಆಸ್ರಣ್ಣ ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಭೇಟಿ
ದರೋಡೆ ನಡೆದ ವಾಸುದೇವ ಆಸ್ರಣ್ಣರ ಮನೆಗೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮುಲ್ಕಿ- ಮೂಡುಬಿದರೆ ಶಾಸಕ ಕೆ. ಅಭಯಚಂದ್ರ ಜೈನ್ ಭೇಟಿ ಮನೆ ಮಂದಿಗೆ ಸಾಂತ್ವನ ಹೇಳಿದ್ದು, ಶೀಘ್ರ ದರೋಡೆಕೋರರನ್ನು ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.