×
Ad

ನವರಾತ್ರಿ ವ್ರತಾಚರಣೆಯಲ್ಲಿ ಪ್ರಧಾನಿ ಮೋದಿಗಿಂತಲೂ ಮಿಗಿಲು ಈ ಜನಪ್ರತಿನಿಧಿ!

Update: 2016-10-04 13:05 IST

ಮಂಗಳೂರು, ಅ.4: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವರಾತ್ರಿ ಸಂದರ್ಭ ಕಳೆದ ಸುಮಾರು 4 ದಶಕದಿಂದ ಉಪವಾಸ ಆಚರಿಸುವುದು ಎಲ್ಲರಿಗೂ ತಿಳಿದ ವಿಚಾರ. ನಮ್ಮ ಮಂಗಳೂರಿನ ಜನಪ್ರತಿನಿಧಿಯೊಬ್ಬರು ಕಳೆದ 8 ವರ್ಷಗಳಿಂದ ನವರಾತ್ರಿ ಸಂದರ್ಭ ಕೇವಲ ನೀರು ಮಾತ್ರ ಸೇವಿಸಿ ವಿಶೇಷ ರೀತಿಯಲ್ಲಿ ದೇವಿಯ ಆರಾಧನೆ ಮಾಡುತ್ತಿದ್ದಾರೆ. ಪ್ರಸಕ್ತ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಕವಿತಾ ಸನಿಲ್ ಅವರೇ ಈ ಜನಪ್ರತಿನಿಧಿ.

ಅವರು ಕಳೆದ 8 ವರ್ಷಗಳಿಂದ ನವರಾತ್ರಿಯ ಪೂರ್ತಿ ಒಂಭತ್ತು ದಿನ ಅನ್ನಾಹಾರವಿಲ್ಲದೆ ಕೇವಲ ನೀರಿನಲ್ಲಿ ಉಪವಾಸ ವ್ರತ ಆಚರಿಸುತ್ತಿದ್ದಾರೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಪರಮ ಭಕ್ತೆಯಾಗಿರುವ ಕವಿತಾ ಸನಿಲ್ ಈ ವ್ರತವನ್ನು ತಮ್ಮ ಸ್ವ ಇಚ್ಛೆಯಿಂದ ಆಚರಿಸುತ್ತಿದ್ದು, ನವರಾತ್ರಿಯ ಒಂಬತ್ತು ದಿನಗಳಲ್ಲಿ ಯಾವುದಾದರೂ ಒಂದು ದಿನ ತಮ್ಮ ಮನೆಯಿಂದ ಅಂದರೆ ಬಿಜೈಯಿಂದ ಕಟೀಲು ಕ್ಷೇತ್ರದವರೆಗೆ ಪಾದಯಾತ್ರೆಯನ್ನೂ ಕೈಗೊಳ್ಳುತ್ತಾರೆ.

ಈ ಪಾದಯಾತ್ರೆಯನ್ನು ಕಳೆದ 12 ವರ್ಷಗಳಿಂದ ಅವರು ನಿರ್ವಹಿಸುತ್ತಿದ್ದಾರೆ. ‘‘ನಾನು 12 ವರ್ಷಗಳಿಂದ ನವರಾತ್ರಿಯ ಸಂದರ್ಭ ಒಂದು ದಿನ ಪಾದಯಾತ್ರೆಯನ್ನು ನಡೆಸುತ್ತಿದ್ದೇನೆ. ಕಳೆದ 8 ವರ್ಷಗಳಿಂದ ಅನ್ನಾಹಾರವಿಲ್ಲದೆ ಬರೀ ನೀರು ಕುಡಿದು ನನ್ನ ವ್ರತವನ್ನು ಮುಂದುವರಿಸಿದ್ದೇನೆ. ಈ ಬಾರಿಯ ನವರಾತ್ರಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಿಂದ ಈ ಉಪವಾಸ ಆರಂಭಿಸಿದ್ದು, ಸೋಮವಾರ (ಅಕ್ಟೋಬರ್ 3ರಂದು) ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿದ್ದೆ. ಮುಂಜಾವ 2:45ಕ್ಕೆ ಬಿಜೈಯಲ್ಲಿರುವ ನನ್ನ ಮನೆಯಿಂದ ಹೊರಟು ಬೆಳಗ್ಗೆ 9:30ರ ವೇಳೆಗೆ ದೇವಸ್ಥಾನ ತಲುಪಿದ್ದೆ’’ ಎಂದು ಕವಿತಾ ಸನಿಲ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

‘‘ನವರಾತ್ರಿ ಸಂದರ್ಭ ನಾನು ಸುಮಾರು 10 ಕೆ.ಜಿ.ಯಷ್ಟು ತೂಕ ಕಳೆದುಕೊಳ್ಳುತ್ತೇನೆ. ಮತ್ತೆ ಕೆಲ ದಿನಗಳಲ್ಲೇ ಆ ತೂಕವನ್ನು ಪಡೆಯುತ್ತೇನೆ. ಉಪವಾಸದ ವೇಳೆ ಕೆಲವೊಮ್ಮೆ ಅಸಿಡಿಟಿಯ ಲಕ್ಷಣಗಳು ಗೋಚರಿಸುವುದನ್ನು ಬಿಟ್ಟರೆ, ಈವರೆಗೆ ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಮನೆಯಲ್ಲೂ ಅಕ್ವಾಗಾರ್ಡ್‌ನ ಶುದ್ಧೀಕರಿಸಿದ ನೀರನ್ನು ಮಾತ್ರವೇ ಸೇವಿಸುತ್ತೇನೆ. ಹೊರಗಡೆ ಹೋದಾಗ ಶುದ್ಧೀಕರಿಸಿದ ನೀರನ್ನೇ ಸೇವಿಸುತ್ತೇನೆ. ದಿನದಲ್ಲಿ ಆಗಾಗ್ಗೆ ಕಾಫಿ ಕುಡಿಯುವ ಅಭ್ಯಾಸ ನನಗಿದ್ದು, ನವರಾತ್ರಿ ಸಂದರ್ಭ ಅದನ್ನೂ ಕುಡಿಯುವುದಿಲ್ಲ’’ ಎಂದು ಅವರು ಹೇಳುತ್ತಾರೆ. ಮನಪಾದ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿರುವ ಕವಿತಾ ಸನಿಲ್, ಕಳೆದ ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಮನಪಾ ಸದಸ್ಯೆಯಾಗಿ ತಮಗೆ ಲಭಿಸಿದ್ದ ಗೌರವಧನವನ್ನು ತಾವು ಬಳಸದೆ, ಆ ಒಟ್ಟು ಹಣಕ್ಕೆ ತಮ್ಮ ಸ್ವಂತ ಒಂದಿಷ್ಟು ಹಣವನ್ನು ಸೇರಿಸಿ ತಮ್ಮ ವಾರ್ಡ್‌ನ ಕುಟುಂಬಗಳಿಗೆ ಅಕ್ಕಿ ವಿತರಿಸುವ ಮೂಲಕ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News