‘‘ಸ್ಮಾರ್ಟ್ ಸಿಟಿಗೆ ಮಂಗಳೂರು ಆಯ್ಕೆಯಾಗಿರುವುದು ಯಾರ ಭಿಕ್ಷೆಯಿಂದಲ್ಲ’’
ಮಂಗಳೂರು, ಅ.4: ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನದಿಂದ ರೂಪುಗೊಳ್ಳಲಿರುವ ಸ್ಮಾರ್ಟ್ ಸಿಟಿಗೆ ಮಂಗಳೂರು ಮಹಾನಗರ ಪಾಲಿಕೆ ಆಯ್ಕೆಯಾಗಿರುವುದು ನಗರದ ಅರ್ಹತೆಯಿಂದಾಗಿಯೇ ವಿನಹ ಯಾರೂ ಭಿಕ್ಷೆ ಕೊಟ್ಟಿದ್ದಲ್ಲ ಎಂದು ಮೇಯರ್ ಹರಿನಾಥ್ ತಮ್ಮ ಎದುರಾಳಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮೋನಪ್ಪ ಭಂಡಾರಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಯಾವತ್ತೋ ಎಚ್ಚೆತ್ತುಕೊಂಡಿದೆ ಎಂದು ಪ್ರತಿ ವಾಗ್ದಾಳಿ ನಡೆಸಿದರು. ಮನಪಾವು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೆ ಸಂಬಂಧಿಸಿ ಕೇಂದ್ರದ ತಜ್ಞರ ತಂಡ ತನಿಖೆ, ಪರಿಶೀಲನೆ ನಡೆಸಿದೆ. ನಗರದ ಅರ್ಹತೆ ಆಧಾರದಲ್ಲಿಯೇ ಆಯ್ಕೆಗೊಂಡಿದೆ. ಮಾತ್ರವಲ್ಲದೆ, ಸ್ಮಾಟ್ ಸಿಟಿ ಯೋಜನೆ ನಮ್ಮದು ಎಂದು ಬಿಜೆಪಿಯ ಕೆಲ ನಾಯಕರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ಕೇಂದ್ರ ಹಾಗೂ ರಾಜ್ಯ ಸರಕಾರದ ಸಮಪಾಲಿನ ಅನುದಾನದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆ. ಮಾತ್ರವಲ್ಲದೆ ಸ್ಥಳೀಯಾಡಳಿತ ಕೂಡಾ ಇದಕ್ಕೆ 79 ಕೋಟಿ ರೂ. ಖರ್ಚು ಮಾಡಬೇಕಿದೆ ಎಂದವರು ಹೇಳಿದರು. ಹಿರಿಯ ಮುತ್ಸದ್ದಿ ರಾಜಕಾರಣಿ ರಾಮಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ಅತ್ಯುತ್ತಮ ನಗರ ಎಂದು ಮೂರು ಬಾರಿ ಪ್ರಶಸ್ತಿಯ ಜತೆಗೆ ನಗದು ಬಹುಮಾನವೂ ಲಭ್ಯವಾಗಿತ್ತು. ಹಾಗಿರುವುದರಿಂದ ಮನಪಾ ಆಡಳಿತ ಎಚ್ಚೆತ್ತುಕೊಂಡಿರುವುದರಿಂದಲೇ ಇದು ಸಾಧ್ಯವಾಗಿದೆ ಎಂದವರು ಹೇಳಿದರು. ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರೋತ್ಥಾನ ಮುಖ್ಯಮಂತ್ರಿಯ 100 ಕೋಟಿ ರೂ. ಅನುದಾನದ 1ನೆ ಹಂತದಲ್ಲಿ 4 ಕಾಮಾಗರಿಗಳ ಟೆಂಡರ್ ಕರೆಯಲಾಗಿದ್ದು, ಉಳಿದ ಎಲ್ಲಾ ಕಾಮಗಾರಿ ಪೂರ್ಣಗೊಂಡಿದೆ. 2ನೆ ಹಂತದ ಅನುದಾನದಲ್ಲಿ ಒಟ್ಟು 124 ಕಾಮಗಾರಿಗಳಿಗೆ ಅನುಮೋದನೆ ದೊರೆತು, 89 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. 3ನೆ ಹಂತದ ಅನುದಾನದಡಿ 169 ಕಾಮಗಾರಿಗಳಿಗೆ ಅನುಮೋದನೆ ದೊರೆತು 66 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು. ಪಂಪ್‌ವೆಲ್ ಬಸ್ಸು ನಿಲ್ದಾಣಕ್ಕೆ ಪೂರಕವಾಗಿ ಬಸ್ಸು ಸಂಚಾರಕ್ಕೆ ಯೋಗ್ಯವಾಗುವಂತೆ ಸಮೀಪದ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ 230 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು, 1.30 ಕೋಟಿ ರೂ.ಗಳ ಕಾಮಗಾರಿಯ ಟೆಂಡರ್ ಇಂದು ತೆರೆಯಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಪ್ಪಿಲತಾ, ಲ್ಯಾನ್ಸಿ ಲೋಟ್ ಪಿಂಟೊ, ಕವಿತಾ ಸನಿಲ್, ಸದಸ್ಯ ಮುಹಮ್ಮದ್ ಉಪಸ್ಥಿತರಿದ್ದರು.