×
Ad

ಸರ್ದಾರ್ ಜೋಕ್ಸ್ ತಡೆ ಆದೇಶದ ಜಾರಿ ಬಹಳ ಕಷ್ಟ: ಸುಪ್ರೀಂಕೋರ್ಟ್

Update: 2016-10-04 18:19 IST

ಹೊಸದಿಲ್ಲಿ, ಅ.4: ಅಂತರ್ಜಾಲ ಹಾಗೂ ಎಸ್ಸೆಮ್ಮೆಸ್‌ಗಳ ಮೂಲಕ ಸಿಖ್ಖರನ್ನು ನಿಂದಿಸುವ ನಗೆಹನಿಗಳ ಪ್ರಸಾರ ತಡೆಯುವ ಆದೇಶ ನೀಡುವ ಇಚ್ಛೆಯನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸಿದೆ. ಆದರೆ, ಅಂತಹ ನಿರ್ದೇಶನದ ಜಾರಿಯೇ ಮುಖ್ಯ ಕಳವಳವಾಗಿದೆಯೆಂದು ಅದು ಹೇಳಿದೆ.

 ಈ ವಿಷಯದಲ್ಲಿ ಯಾವುದೇ ಮಾರ್ಗದರ್ಶಿ ಸೂತ್ರ ಇರಬಾರದೆಂದು ತಾವು ಹೇಳುತ್ತಿಲ್ಲ. ಆದರೆ, ಈ ನಿರ್ದೇಶನಗಳ ಜಾರಿ ಹೇಗೆಂಬುದೇ ಪ್ರಶ್ನೆಯಾಗಿದೆಯೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ನ್ಯಾಯಮೂರ್ತಿಗಳಾದ ಸಿ. ನಾಗಪ್ಪನ್ ಹಾಗೂ ಎ.ಎಂ. ಖಾನ್ವಿಲ್ಕರ್‌ರನ್ನೊಳಗೊಂಡ ಪೀಠವೊಂದು ತಿಳಿಸಿದೆ.

ಟೀಕೆಗಳು ಅಥವಾ ನಗೆಹನಿಗಳು ಸಮುದಾಯವನ್ನೇ ಅಪಹಾಸ್ಯ ಹಾಗೂ ಅಪಮಾನ ಮಾಡುವಂತಹವುಗಳಾಗಿರಬಹುದು. ಆದರೆ, ಅಂತಹ ಯಾವುದೇ ಆದೇಶವನ್ನು ಜಾರಿಗೊಳಿಸುವುದೇ ಸಮಸ್ಯೆಯಾಗಿದೆಯೆಂದು ಅದು ಹೇಳಿದೆ.

 ಅಂತಹ ನಗೆಹನಿ ಹಾಗೂ ಸಾಹಿತ್ಯಗಳ ವಾಣಿಜ್ಯಕ ದುರ್ಲಾಭ ಪಡೆಯುವುದನ್ನು ನಿಲ್ಲಿಸುವಂತೆ ತಾವು ಆದೇಶ ನೀಡಬಲ್ಲೆವು. ಆದರೆ, ಖಾಸಗಿ ಸ್ಥಳಗಳಲ್ಲಿ ಅಂತಹ ಕೃತ್ಯಗಳನ್ನು ತಡೆಯುವುದು ಕಷ್ಟವೆಂದು ಪೀಠ ಅಭಿಪ್ರಾಯಿಸಿದೆ.

ಈಶಾನ್ಯ ಹಾಗೂ ದಕ್ಷಿಣದ ಜನರೂ ಇಂತಹ ಕಿರುಕುಳ ಹಾಗೂ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ನೀವು ಕನ್ನಡಿಗ, ತೆಲುಗು ಅಥವಾ ಮಲಯಾಳಿ ಆಗಿದ್ದರೂ ಜನರು ಈಗಲೂ ನಿಮ್ಮನ್ನು ‘ಮದ್ರಾಸಿ’ ಎಂದೇ ಕರೆಯುತ್ತಾರೆ. ಇದು ಅತ್ಯಂತ ಅವಮಾನಕರವೆಂದು ಅದು ಹೇಳಿದೆ.

ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು 4 ವಾರ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News