ಬಸ್ ತಡೆದು ಹಲ್ಲೆಗೆ ಯತ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ ಮಾನಹಾನಿ
ಸುಳ್ಯ, ಅ.4: ಬಸ್ ಪ್ರಯಾಣದ ವೇಳೆ ತಡೆದು ನಿಲ್ಲಿಸಿ ಹಲ್ಲೆಗೆ ಯತ್ನಿಸಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಚಾರವನ್ನು ಪ್ರಚಾರ ಮಾಡುವ ಮೂಲಕ ಮಾನಹಾನಿ ಮಾಡಲಾಗಿದೆ ಎಂದು ಸುಳ್ಯದ ಯುವಕರೊಬ್ಬರು ಪೊಲೀಸ್ ದೂರು ನೀಡಿದ್ದಾರೆ.
ಸುಳ್ಯದ ಗಾಂಧಿನಗರ ನಿವಾಸಿ ದಿ. ಅಬ್ದುಲ್ ಖಾದರ್ ಎಂಬವರ ಪುತ್ರ ಎ.ಕೆ.ಮುಹಮ್ಮದ್ ಹನೀಫ್ ಸುಳ್ಳು ಆರೋಪ ಮತ್ತು ಪ್ರಚಾರದಿಂದ ಮನನೊಂದು ಪೊಲೀಸರಿಗೆ ದೂರು ನೀಡಿರುವ ವ್ಯಕ್ತಿ. ಎ.ಕೆಮುಹಮ್ಮದ್ ಹನೀಫ್ ಅವರು ಬಸ್‌ನಲ್ಲಿ ಬೆಂಗಳೂರಿಗೆಂದು ಹೋಗುತ್ತಿದ್ದಾಗ ನಡೆದ ಘಟನೆಯನ್ನು ಉಲ್ಲೇಖಿಸಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
‘‘ನಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಲು ಅ.3ರಂದು ರಾತ್ರಿ 9:30ಕ್ಕೆ ಸುಳ್ಯದಿಂದ ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಬಸ್ಸನ್ನು ಸುಳ್ಯ ಬಸ್ಸು ನಿಲ್ದಾಣದಿಂದ ಹತ್ತಿದ್ದೆ. ಬಸ್‌ನಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿದ್ದು ಹಿಂಭಾಗದ ಮೂರು ಸೀಟ್‌ಗಳ ಸಾಲಿನಲ್ಲಿ ಒಂದು ಸೀಟ್ ಉಳಿದಿತ್ತು. ಇದರಲ್ಲಿ ಕಿಟಕಿಯ ಸೈಡಿನಲ್ಲಿ ಓರ್ವ ಯುವತಿ ಕುಳಿತಿದ್ದು ಮಧ್ಯದ ಸೀಟ್‌ನಲ್ಲಿ ಬ್ಯಾಗ್ ಇಡಲಾಗಿತ್ತು. ಇನ್ನೊಂದು ಸೈಡ್‌ಸೀಟ್‌ನಲ್ಲಿ ನಾನು ಕುಳಿತುಕೊಂಡಿದ್ದೆ. ಅದಾದ ನಂತರ ಸುಳ್ಯದಿಂದ ಹೊರಟ ಸರಕಾರಿ ಬಸ್ ಮುಂದೆ ಸಾಗಿ ಬಸ್ಸು ಕಲ್ಲುಗುಂಡಿಯಿಂದ ಮುಂದೆ ಶಾಲೆಯ ಬಳಿ ತಲುಪುತ್ತಿದ್ದಂತೆ ಆಟೋ ಡ್ರೈವರ್ ಸುಧಾ ಮತ್ತು ಹೋಟೆಲ್‌ವೊಂದರ ದಿನು ಸೇರಿದಂತೆ 20 ಜನರ ಗುಂಪು ಬಸ್ಸನ್ನು ತಡೆದು ನಿಲ್ಲಿಸಿ, ನನ್ನಲ್ಲಿ ಬಂದು ನನ್ನ ಕೊರಳ ಪಟ್ಟಿ ಹಿಡಿದು ನಿನ್ನ ಹೆಸರೇನು? ನೀನು ಎಲ್ಲಿಂದ ಬರುತ್ತೀಯಾ? ಬ್ಯಾರಿ... ನೀನು ಭಯೋತ್ಪಾದಕ, ಪಾಕಿಸ್ತಾನಕ್ಕೆ ಹೋಗು ಎಂದೆಲ್ಲಾ ಹೇಳಿ ಅಶ್ಲೀಲ ಶಬ್ದಗಳಿಂದ ಬೈದು ಬಸ್ಸಲ್ಲಿ ಇರುವ ಇತರರ ಮುಂದೆ ನಿಂದಿಸಿ ಅವಮಾನಿಸಿದ್ದಾರೆ. ನಂತರ ಕಿಟಕಿ ಬದಿಯಿದ್ದ ಯುವತಿಯ ಬಳಿ ಅವರು ವಿಚಾರಣೆ ನಡೆಸಿದಾಗ, ನನಗೂ ಯುವತಿಗೂ ಯಾವುದೇ ಸಂಬಂಧವಿಲ್ಲವೆಂದು ತಿಳಿದ ಬಳಿಕ ಅವರು ಅಲ್ಲಿಂದ ಬಿಟ್ಟು ಹೋಗಿದ್ದಾರೆ.
ನಂತರ ಬಸ್ಸು ಮಡಿಕೇರಿ ಬಸ್ಸು ನಿಲ್ದಾಣಕ್ಕೆ ತಲುಪುತ್ತಿದ್ದಂತೆ ನಾನು ಬಸ್‌ನಿಂದ ಇಳಿದು ಶೌಚಾಲಯಕ್ಕೆ ಹೋದಾಗ ಸುಮಾರು 20 ರಿಂದ 25 ಜನ ನನ್ನ ಮೇಲೆ ಹಲ್ಲೆಗೆ ಯತ್ನಿಸಿದಾಗ ನಾನು ಬಸ್ ನಿಲ್ದಾಣದಲ್ಲಿದ್ದ ಸಬ್‌ಸ್ಟೇಷನ್ ಬಳಿ ಹೋಗಿ ಅಲ್ಲಿದ್ದ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದೇನೆ. ನಂತರ ಮಡಿಕೇರಿ ಠಾಣಾ ಪೊಲೀಸರು ಅಲ್ಲಿಗೆ ಬಂದು ನನ್ನನ್ನು ವಿಚಾರಣೆ ನಡೆಸಿದಾಗ ನನಗೂ ಆ ಯುವತಿಗೂ ಯಾವುದೇ ಸಂಬಂಧವಿಲ್ಲವೆಂದು ಪೊಲೀಸರು ಸೇರಿದ್ದ ಗುಂಪನ್ನು ಚದುರಿಸಿ ನನ್ನನ್ನು ಅಲ್ಲಿಂದ ಬಿಟ್ಟಿದ್ದಾರೆ. ಇಷ್ಟರೊಳಗೆ ನಾನು ಹೋಗಬೇಕಿದ್ದ ಬಸ್ ಹೊರಟು ಹೋಗಿತ್ತು. ನಂತರ ನಾನು ಬೇರೆ ಬಸ್‌ನಲ್ಲಿ ಸುಳ್ಯಕ್ಕೆ ವಾಪಸಾಗಿದ್ದೇನೆ. ಈ ಎಲ್ಲಾ ಘಟನೆಯಿಂದಾಗಿ ಒಂದು ದಿನದ ವ್ಯಾಪಾರ ವಹಿವಾಟುಗಳು ನಷ್ಟವಾಗಿದೆ.
ನಾನು ಬೆಳಗ್ಗೆ ಮನೆಗೆ ಮುಟ್ಟಿದಾಗ ನನ್ನ ಸ್ನೇಹಿತರು ಕಾಲ್ ಮಾಡಿ ನನ್ನ ಪೋಟೋವನ್ನು ಜೈ ಶ್ರೀ ರಾಮ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿದ್ದು ಅದು ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ ಎಂಬುದಾಗಿ ತಿಳಿಸಿದರು. ನನಗೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿದ್ದು ಈ ರೀತಿಯ ಸುಳ್ಳು ಪ್ರಚಾರದಿಂದ ಮಾನಸಿಕ ಹಿಂಸೆಯಾಗಿದೆ. ಪೇಸ್‌ಬುಕ್ ಹಾಗೂ ವಾಟ್ಸಪ್‌ನಲ್ಲಿ ನನ್ನ ಫೋಟೋವನ್ನು ಹಾಕಿರುವುದರಿಂದ ನನ್ನ ಮಾನ ಹರಾಜಾಗುವಂತಾಗಿದೆ. ಇಂತಹ ಕೆಲಸ ಮಾಡಿದ ಜೈ ಶ್ರೀ ರಾಮ್ ಫೇಸ್‌ಬುಕ್ ಪೇಜ್‌ನ ಅಡ್ಮಿನ್ ಹಾಗೂ ಕಲ್ಲುಗುಂಡಿಯ ಯುವಕರ ಮೇಲೆ ಕಾನೂನು ಕ್ರಮ ಜರಗಿಸಬೇಕು’’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.