ಬೈಕ್‌ನಲ್ಲೇ ಮೂರು ದೇಶಗಳನ್ನು ಸುತ್ತಿದ ಸ್ನೇಹಿತರು
ಕಾಸರಗೋಡು, ಅ.4: ಕಾಸರಗೋಡು ಮೂಲದ ಇಬ್ಬರು ಸ್ನೇಹಿತರು ಬೈಕ್‌ನಲ್ಲಿ ಮೂರು ದೇಶಗಳನ್ನು ಸುತ್ತುವ ಮೂಲಕ ಗಮನ ಸೆಳೆದಿದ್ದಾರೆ.
ಕಾಸರಗೋಡು ಅಡೂರಿನ ಕೆ.ಎಚ್.ಜಾಫರ್ ಮತ್ತು ಕೋಝಿಕ್ಕೋಡ್‌ನ ಶಬರಿನಾಥ್ ಈ ಸಾಧನೆ ಮಾಡಿದವರು. 50 ದಿನಗಳ ಅವಧಿಯಲ್ಲಿ ಇವರು ಯಮಹಾ ಬೈಕ್‌ನಲ್ಲಿ ಭಾರತ, ನೇಪಾಳ ಮತ್ತು ಭೂತಾನ್ ದೇಶ ಸುತ್ತಿದ ಸಾಧನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನ ಮಾಡುತ್ತಿದ್ದ ಇವರಿಗೆ ಬೈಕ್‌ನಲ್ಲಿ ವಿದೇಶಗಳನ್ನು ಸುತ್ತಬೇಕೆಂಬುದು ಕನಸಾಗಿತ್ತು. ಅಧ್ಯಯನದ ನಡುವೆ ಸ್ವಲ್ಪ ಸಮಯಾವಕಾಶ ಲಭಿಸಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಈ ಇಬ್ಬರು ಸ್ನೇಹಿತರು ಒಟ್ಟು 50 ದಿನಗಳಲ್ಲಿ ಮೂರು ದೇಶಗಳನ್ನು ಸುತ್ತಿ ಬಂದಿದ್ದಾರೆ.
ಕಾಸರಗೋಡಿನಿಂದ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳಿದ ಇವರು ಅಲ್ಲಿಂದ ಹಂಪಿ, ಔರಂಗಾಬಾದ್ ಮೂಲಕ ಇಂಡಿಯಾ ಗೇಟ್ ತಲುಪಿದರು. ಅಲ್ಲಿಂದ ಕುಲು ಮನಾಲಿ ಮೂಲಕ ಲಡಾಖ್‌ಗೆ ಪ್ರಯಾಣ ಬೆಳೆಸಿದರು. ಮರುದಿನ ಗೋರಖ್‌ಪುರದ ಮೂಲಕ ನೇಪಾಳಕ್ಕೆ ಪ್ರವೇಶಿಸಿದರು. ಬಳಿಕ ಕಾಠ್ಮಂಡುವಿನಿಂದ ಡಾರ್ಜಿಲಿಂಗ್‌ಗೆ ತೆರಳಿದ್ದು, ಅಲ್ಲಿಂದ ಭೂತಾನ್‌ಗೆ ಪ್ರವೇಶಿಸಿದರು.
ಅಂದಹಾಗೆ ಮನೆಮಂದಿ ಬೈಯಬಹುದು ಎನ್ನುವ ಕಾರಣಕ್ಕಾಗಿ ಮನೆಮಂದಿಯ ಬಳಿ ಇವರು ಪ್ರವಾಸದ ವಿಷಯವನ್ನು ಮುಚ್ಚಿಟ್ಟಿದ್ದರು. 50 ದಿನಗಳ ಇವರ ಪ್ರವಾಸಕ್ಕೆ ತಗಲಿದ್ದು 90 ಸಾವಿರ ರೂ. ಮಾತ್ರ.
ಹಲವಡೆ ನಮಗೆ ಉತ್ತಮ ಸ್ವಾಗತ ಲಭಿಸಿದೆ. ಇದು ನಮ್ಮ ಜೀವನದ ಕನಸಾಗಿತ್ತು. ಇನ್ನಷ್ಟು ದೇಶವನ್ನು ಮುಂದೆ ಸುತ್ತುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ ಎನ್ನುವುದು ಈ ಇಬ್ಬರ ಮಾತು.