ಗ್ರಾಮದೇವತೆಗಳ ಅಧ್ಯಯನದಿಂದ ಮನುಕುಲದ ಚರಿತ್ರೆಯ ಅರಿವು ಸಾಧ್ಯ: ಡಾ.ಸಿದ್ಧಲಿಂಗಯ್ಯ
ಉಡುಪಿ, ಅ.4: ಜನರ ಮೈಮೇಲೆ ಬಂದು ಜನರ ಸಮಸ್ಯೆ, ಕಷ್ಟಗಳಿಗೆ ಸ್ಪಂದಿಸಿ, ಪರಿಹಾರ ಒದಗಿಸುವ ಮಾತನಾಡುವ ಗ್ರಾಮ ದೇವತೆಗಳ ಅಧ್ಯ ಯನದಿಂದ ಅದರ ಹಿಂದೆ ಇರುವ ಮನುಕುಲದ ಚರಿತ್ರೆಯನ್ನು ತಿಳಿದು ಕೊಳ್ಳಬಹುದಾಗಿದೆ. ಆದುದರಿಂದ ಗ್ರಾಮ ದೇವತೆಗಳ ಕುರಿತ ಅಧ್ಯಯನ ಅತಿಅಗತ್ಯವಾಗಿದೆ ಎಂದು ಚಿಂತಕ ಹಾಗೂ ಕವಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಮಂಗಳವಾರ ರಾಜಾಂಗಣದಲ್ಲಿ ನಡೆದ ಶರನ್ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ‘ಮಾತನಾಡುವ ದೇವರುಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಗ್ರಾಮದ ಅವಿಭಾಜ್ಯ ಅಂಗವಾಗಿರುವ ಗ್ರಾಮ ದೇವತೆಗಳೆಂಬ ಜ್ಞಾನ ನಿಧಿಯನ್ನು ಕಡೆಗಣಿಸಬಾರದು. ಅವುಗಳ ಹಾಡುಗಳಲ್ಲಿ ಜೀವ ಚೈತನ್ಯ ಅಡಕ ವಾಗಿದೆ. ಸಮೃದ್ಧಿಯ ಆಚರಣೆಗಳಿವೆ. ಗ್ರಾಮ ದೇವತೆಗಳ ಪುರಾಣ, ಕಥೆ ಗಳನ್ನು ಅಧ್ಯಯನ ಮಾಡುವುದರಿಂದ ಇಡೀ ಜನಾಂಗದ ಕನಸು ಚರಿತ್ರೆ, ಚಿಂತನೆ, ಭಾವನೆಗಳನ್ನು ತಿಳಿದುಕೊಳ್ಳಬಹುದು. ಆದುದರಿಂದ ಗ್ರಾಮ ದೇವತೆಗಳ ಮೇಲೆ ಅಭಿಮಾನ, ಆಸಕ್ತಿ, ಭಕ್ತಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಗ್ರಾಮೀಣ ಜನರ ಕನಸು, ಚಿಂತನಾ ಕ್ರಮವು ಗ್ರಾಮ ದೇವತೆಗಳ ಪರಿ ಕಲ್ಪನೆಯಲ್ಲಿ ವ್ಯಕ್ತವಾಗುತ್ತದೆ. ಅವರಿಗೆ ದೇವರುಗಳಂದರೆ ಬಂಧುಗಳಿದ್ದಂತೆ. ನಿಸರ್ಗದಲ್ಲಿರುವ ಮರ, ಬಂಡೆ, ಗುಡ್ಡ ಬೆಟ್ಟಗಳು ಅವರ ದೇವರುಗಳು. ಪ್ರತಿಯೊಬ್ಬರಿಗೆ ಮನೆ, ಆಹಾರ, ಬಟ್ಟೆ ಇರಬೇಕೆಂಬ ಮನುಷ್ಯನ ಅಂತ ರಂಗದ ಭಾವನೆ, ಚಿಂತನಾ ಕ್ರಮವನ್ನು ದೇವರುಗಳ ಮೂಲಕ ಅಭಿವ್ಯಕ್ತ ಪಡಿಸಲಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಬೇಕೆಂಬ ಸುಪ್ತ ಪ್ರಜ್ಞೆ ಅಲ್ಲಿ ಕಾಣ ಬಹುದು ಎಂದು ಅವರು ತಿಳಿಸಿದರು.
ಮುಂಬೈ ವಿವಿಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ‘ನಮ್ಮ ಪರಿಸರ’ ವಿಷಯದ ಕುರಿತು ಉಪನ್ಯಾಸ ನೀಡಿ, ಜಾನ ಪದ, ದೇಶಿಯ ಹಾಗೂ ನಂಬಿಕೆಯ ನೆಲೆಗಳಲ್ಲಿ ಪರಿಸರ ಪ್ರೀತಿ ಅಡಕ ವಾಗಿದೆ. ಆದರೆ ಇಂದು ನಾವು ಪರಿಸರದ ಬಗ್ಗೆ ನಿರ್ಲಕ್ಷ ತೋರುತ್ತಿದ್ದೇವೆ. ಸಾಲುಮರದ ಕಲ್ಪನೆಯು ನಮ್ಮ ಸಂಸ್ಕೃತಿಯ ಭಾಗ. ಆದರೆ ಇಂದು ಅದರ ಮಾರಣಹೋಮ ನಡೆಸಲಾಗುತ್ತಿದೆ ಎಂದರು.
ಪರಿಸರ ಅಂದರೆ ಕೇವಲ ನಿಸರ್ಗಕ್ಕೆ ಸೀಮಿತವಾಗಿಲ್ಲ. ನಮ್ಮ ಪ್ರತಿ ಯೊಂದು ಆಚರಣೆ, ಸಂಸ್ಕೃತಿಗಳಲ್ಲಿಯೂ ಪರಿಸರ ಇದೆ. ಆದುದರಿಂದ ಭಾವಾನಾತ್ಮಕ, ಆರ್ದಶ, ಸೈದಾಂತಿಕ ನೆಲೆಯಲ್ಲಿ ಪರಿಸರವನ್ನು ಅಭ್ಯಾಸ ಮಾಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸರಕಾರ, ನ್ಯಾಯಾಲಯಗಳು ಮಾಡದ ಕೆಲಸಗಳನ್ನು ಗ್ರಾಮ ದೇವತೆಗಳು ಮಾಡುತ್ತಿವೆ. ಅವುಗಳ ಸತ್ಯದ ಪರಿಪಾಲನೆ ನಿರ್ಲಕ್ಷಿಸಲು ಆಗಲ್ಲ. ದೇವರನ್ನು ಮಾನವರಲ್ಲಿ ತರುವ ಮೂಲಕ ಮಾನವೀಯತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡಲಾಗು ತ್ತಿದೆ ಎಂದು ಹೇಳಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ ಉಪಸ್ಥಿತರಿದ್ದರು. ಪೇಜಾವರ ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಅಂದು ಅನುಮಾನ, ಇಂದು ಅಭಿಮಾನ
32 ವರ್ಷಗಳ ಹಿಂದೆ ಪೇಜಾವರ ಶ್ರೀಗಳನ್ನು ಕಾಣುವಾಗ ಅನುಮಾನದಿಂದ ಕಂಡಿದ್ದೆ. ಆದರೆ ಇಂದು ಅವರೊಂದಿಗೆ ವೇದಿಕೆ ಹಂಚುಕೊಳ್ಳುವಾಗ ಅಭಿಮಾನ ಪಡುತ್ತಿದ್ದೇನೆ. ಇಷ್ಟು ವರ್ಷಗಳ ಅಂತರದಲ್ಲಿ ಅವರ ಮೇಲಿನ ಅನುಮಾನ ಪರಿಹಾರವಾಗಿ ಅಭಿಮಾನ ಬೆಳೆದಿದೆ. ಅವರ ಅಸ್ಪಶ್ಯತಾ ನಿವಾ ರವಣಾ ಕಾಳಜಿ ಪ್ರಶ್ನಾತೀತ. ದಲಿತರ ಮನೆಗಳಿಗೆ ಭೇಟಿ ನೀಡಿದ ಪ್ರಥಮ ಗುರು ಎಂದು ಕವಿ ಡಾ.ಸಿದ್ಧಲಿಂಗಯ್ಯ ಹೇಳಿದರು.