×
Ad

ವೈದ್ಯಕೀಯ ವೃತ್ತಿಯಲ್ಲಿ ಮಾನವೀಯ ಸೇವಾ ಮನೋಭಾವ ಮುಖ್ಯ: ಡಾ.ಎಂ.ಶಾಂತಾರಾಮ ಶೆಟ್ಟಿ

Update: 2016-10-04 21:17 IST

ಮಂಗಳೂರು,ಅ.4:ಮಾನವೀಯ ನೆಲೆಯ ಸೇವಾ ಮನೋಭಾವ ವೈದ್ಯಕೀಯ ವೃತ್ತಿಯಲ್ಲಿ ಮುಖ್ಯ ಎಂದು ವೈದ್ಯ ನಿಟ್ಟೆ ವಿಶ್ವ ವಿದ್ಯಾನಿಲಯದ ಪ್ರಭಾರ ಕುಲಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ತಿಳಿಸಿದರು.

ಅವರು ಇಂದು ಯೆನೆಪೊಯ ವಿಶ್ವ ವಿದ್ಯಾನಿಲಯದ ಯೆಂಡುರೆನ್ಸ್ ರೆನ್‌ನಲ್ಲಿ ಹಮ್ಮಿಕೊಂಡ 2016-17ನೆ ಸಾಲಿನ ಓರಿಯೆಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಸೂಕ್ತ ಮಾರ್ಗದರ್ಶನ ದೊರೆತಾಗ ಉತ್ತಮ ಸಾಧನೆ ಮಾಡಲು ಸಾಧ್ಯ.ಒಲಿಂಪಿಕ್ ಕ್ರೀಡೆಯಲ್ಲಿ ವೇಗದ ಓಟಗಾರನಾಗಿ ಮೂಡಿಬಂದ ಉಸೈನ್ ಬೋಲ್ಟ್ ಕ್ರಿಕೆಟ್ ಆಟಗಾರನಾಗಲು ತರಬೇತಿ ಪಡೆಯುತ್ತಿದ್ದ ವೇಳೆ ಆತನ ಸಾಮರ್ಥ್ಯವನ್ನು ಗುರುತಿಸಿದ ತರಬೇತುದಾರ ನೀಡಿದ ಮಾರ್ಗದರ್ಶನ ಪ್ರಕಾರ ಆತ ಅತ್ಲೆಟ್ ಕ್ಷೇತ್ರದಲ್ಲಿ ತರಬೇತಿ ಪಡೆದು ವಿಶ್ವದ ಅಗ್ರಮಾನ್ಯ ಓಟಗಾರನಾಗಲು ಸಾಧ್ಯವಾಯಿತು. ಆರೋಗ್ಯ ವಿಜ್ಞಾನದ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಕಡೆಗೆ ಒತ್ತು ನೀಡುವುದರ ಜೊತೆಗೆ ಇತರರ ಬಗ್ಗೆ ದಯೆ, ಅನುಕಂಪ, ಕರುಣೆ, ಸೇವಾ ಮನೋಭಾವ ಒಳಗೊಂಡಂತೆ ಮಾನವೀಯ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಡಾ.ಶಾಂತಾರಾಮ ಶೆಟ್ಟಿ ಯುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯಬೇಕು. ಬಹಳಷ್ಟು ಯುವತಿಯರು ತಮ್ಮ ವೈದ್ಯಕೀಯ ವೃತ್ತಿಯನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಾರೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಹಲವು ವರುಷಗಳ ಹಿಂದೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಪ್ರಸಕ್ತ ಈ ಪ್ರಮಾಣ ಏರಿಕೆಯಾಗಿದೆ. ಯೆನೆಪೊಯ ವಿಶ್ವವಿದ್ಯಾನಿಲಯ ಉತ್ತಮ ಸೌಕರ್ಯಗಳನ್ನು ಹೊಂದಿರುವ ಸಂಸ್ಥೆಯಾಗಿ ಬೆಳೆದಿದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕಾಗಿದೆ ಎಂದು ಡಾ.ಶಾಂತಾರಾಮ ಶೆಟ್ಟಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ಅಬ್ದುಲ್ಲಾ ಕುಂಞ ಮಾತನಾಡುತ್ತಾ, ಯೆನೆಪೋಯ ವಿಶ್ವ ವಿದ್ಯಾನಿಲಯದ ನೂತನ ವೈದ್ಯಕೀಯ ವಿದ್ಯಾರ್ಥಿಗಳ ತಂಡಕ್ಕೆ ಶುಭ ಹಾರೈಸಿದರು. ಸಂಸ್ಥೆಯಲ್ಲಿರುವ ನುರಿತ ಸಂಪನ್ಮೂಲ ತಂಡದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸಮಾರಂಭದಲ್ಲಿ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್‌ನ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞ, ಉಪ ಕುಲಪತಿ ಡಾ.ವಿಜಯ ಕುಮಾರ್, ವೈದ್ಯಕೀಯ ಕಾಲೇಜಿನ ಡೀನ್ ಡಾ.ಗುಲಾಂ ಜಿಲಾನಿ ಖಾದ್ರಿ, ಯೆನೆಪೊಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್.ಶ್ರೀಪತಿರಾವ್ , ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಆಶಾ ಶೆಟ್ಟಿ, ಫಿಸಿಯೋಥೆರಪಿ ಕಾಲೇಜಿನ ಮುಖ್ಯಸ್ಥ ಡಾ.ಪದ್ಮ ಕುಮಾರ್, ಪರೀಕ್ಷಾಂಗ ನಿಯಂತ್ರಕ ಡಾ.ನಂದೀಶ್ ಮೊದಲಾದವರು ಭಾಗವಹಿಸಿದ್ದರು.

ಕುಲಸಚಿವ ಡಾ.ಶ್ರೀಕುಮಾರ್ ಮೆನನ್ ಸ್ವಾಗತಿಸಿದರು. ಡಾ.ಮಲ್ಲಿಕಾ, ಡಾ.ರೋಶನಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News