×
Ad

ಚೈತ್ರಾಳ ಆತ್ಮಹತ್ಯೆಗೆ ದುಷ್ಕೃತ್ಯ ಕಾರಣ: ಪ್ರಕರಣ ದಾಖಲು

Update: 2016-10-04 21:28 IST

ಉಡುಪಿ, ಅ.4: ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಚೈತ್ರಾ(18) ಉಪ್ಪೂರು ಸಮೀಪದ ಕೆ.ಜಿ.ರೋಡ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಆಕೆಯ ಮೇಲೆ ನಡೆದ ದುಷ್ಕೃತ್ಯವೇ ಕಾರಣ ಎಂದು ಆಕೆಯ ತಂದೆ ಚಂದ್ರಶೇಖರ್ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚೈತ್ರಾ ಅಂಬಲಪಾಡಿಯ ಶಾಮಿಲಿ ಹಾಲ್ ಸಮೀಪದ ಮಾಂಡವಿ ಟವರ್ಸ್‌ನಲ್ಲಿರುವ ನೆಟ್‌ಜಿ ಎಂಬ ಹೆಸರಿನ ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಆದರ್ಶ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಇವರ ಮನೆಗೆ ಬಂದು ಹೋಗುತ್ತಿದ್ದನು. ಇವರ ಮದುವೆಗೂ ಮನೆಯವರು ಒಪ್ಪಿ ಕೊಂಡಿದ್ದರು. ಸೆ.28ರಂದು ಅಪರಾಹ್ನ 12:45ಗಂಟೆ ಸುಮಾರಿಗೆ ನೆಟ್‌ಜಿ ಕಂಪ್ಯೂಟರ್ ಸೆಂಟರ್‌ನಿಂದ ಚೈತ್ರಾಳನ್ನು ಪವನ್ ಹಾಗೂ ಸಾಗರ್ ಎಂಬವರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಂಜೆ 4ಗಂಟೆ ಸುಮಾರಿಗೆ ಅಲ್ಲೇ ವಾಪಸು ಬಿಟ್ಟುಹೋಗಿದ್ದರು.

ಈ ಸಮಯ ಆದರ್ಶ್, ಪವನ್, ಸಾಗರ್ ಎಂಬವರು ಚೈತ್ರಾಳ ಮೇಲೆ ಯಾವುದೋ ದುಷ್ಕೃತ್ಯ ಎಸಗಿರಬಹುದಾಗಿದ್ದು, ಅದೇ ಕಾರಣದಿಂದ ಚೈತ್ರಾ ಅದೇ ದಿನ ಸಂಜೆ ಕೆ.ಜಿ.ರೋಡಿನ ಸೇತುವೆ ಮೇಲೆ ಬ್ಯಾಗ್ ಮತ್ತು ಚಪ್ಪಲ್ ಇಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News