×
Ad

ವಿಜಯಾಬ್ಯಾಂಕ್‌ನಿಂದ 57 ಬಾಲಕಿಯರ ದತ್ತು ಸ್ವೀಕಾರ

Update: 2016-10-04 21:45 IST

ಮಣಿಪಾಲ,ಅ.4: ಬ್ಯಾಂಕುಗಳು ಠೇವಣಿ, ಸಾಲ, ಶಾಖೆಗಳ ಹೆಚ್ಚಳಕ್ಕೆ ಪ್ರತಿ ವರ್ಷ ಗುರಿ ನಿಗದಿ ಪಡಿಸುವಂತೆ, ವಿಜಯಾ ಬ್ಯಾಂಕ್ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿ ಹಂಚಿಕೆಗೂ ಗುರಿ ನಿಗದಿ ಪಡಿಸಿದ ಪ್ರಥಮ ಬ್ಯಾಂಕ್ ಆಗಿದೆ ಎಂದು ವಿಜಯಾ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಡಾ.ಕಿಶೋರ್ ಸಾಂಸಿ ಹೇಳಿದ್ದಾರೆ.

ಬ್ಯಾಂಕಿನ ಸಿಎಸ್‌ಆರ್ ನಿಧಿಯಡಿ ವಿಜಯಾಬ್ಯಾಂಕ್ ಉಡುಪಿ ವಲಯ ವ್ಯಾಪ್ತಿಯ ಮೂರು ಜಿಲ್ಲೆಗಳ ಆರ್ಥಿಕವಾಗಿ ಹಿಂದುಳಿದ ಒಟ್ಟು 57 ಬಾಲಕಿಯರನ್ನು ದತ್ತು ಸ್ವೀಕರಿಸಿದ್ದು, ಅವರಿಗೆ ಇಂದು ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ದತ್ತು ಪತ್ರಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.

ದೇಶ ಸರ್ವತೋಮುಖ ಅಭಿವೃದ್ಧಿಯಾಗಲು ದೇಶದೊಳಗಿನ ಸಮಾಜವೂ ತಳಮಟ್ಟದಿಂದ ಏಳಿಗೆಯನ್ನು ಕಾಣಬೇಕಾಗಿದೆ. ಇದರಲ್ಲಿ ದೇಶದ ಉದ್ದಿಮೆಗಳ ಪಾತ್ರ ಹಾಗೂ ಜವಾಬ್ದಾರಿಯೂ ಇವೆ. ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ವಿಜಯಾ ಬ್ಯಾಂಕ್ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ದೇಶಾದ್ಯಂತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಿಎಸ್‌ಆರ್ ನಿಧಿಯಡಿ ಕಾರ್ಯರೂಪಕ್ಕಿಳಿಸಲು ಮುಂದಾಗಿದೆ ಎಂದರು.

ಬ್ಯಾಂಕಿನ ಉಡುಪಿ ವಲಯ ವ್ಯಾಪ್ತಿಯಲ್ಲಿ 57 ಬಡಕುಟುಂಬದ ಬಾಲಕಿಯರನ್ನು ದತ್ತು ಸ್ವೀಕರಿಸಿದ್ದು, ಅವರಿಗೆ ಸ್ನಾತಕೋತ್ತರ ಪದವಿಯವರೆಗೆ ಕಲಿಯಲು ನೆರವನ್ನು ಬ್ಯಾಂಕ್ ನೀಡಲಿದೆ. ಶಿಕ್ಷಣದ ಮೂಲಕ ಹೆಣ್ಣು ಮಕ್ಕಳ ಸಬಲೀಕರಣ ಬ್ಯಾಂಕಿನ ಉದ್ದೇಶವಾಗಿದೆ. 20 ವರ್ಷಗಳಲ್ಲಿ ಈ ಪುಟಾಣಿ ಮಕ್ಕಳಲ್ಲಿ ಕೆಲವರಾದರೂ ವಿಜಯಾ ಬ್ಯಾಂಕಿಗೆ ಆಫೀಸರ್ ಆಗಿ ಸೇರ್ಪಡೆ ಗೊಳ್ಳುವಂತಾಗಲಿ ಎಂದವರು ಹಾರೈಸಿದರು.

ಅಲ್ಲದೇ ಇದೇ ನಿಧಿಯಡಿ ಶಿರೂರಿನಲ್ಲಿರುವ ಪದ್ಮಾವತಿ ಕಣ್ಣಿನ ಆಸ್ಪತ್ರೆಗೆ 10.50 ಲಕ್ಷ ರೂ.ವೆಚ್ಚದ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅತ್ಯಾಧುನಿಕ ಯಂತ್ರವೊಂದನ್ನು ನೀಡಲಾಗಿದ್ದು, ಬೆಳಪು ಮತ್ತು ಎಲ್ಲೂರಿನ ಸರಕಾರಿ ಪ್ರೌಢ ಶಾಲೆಗಳಿಗೆ ಶೌಚಾಲಯಗಳನ್ನು ಸಹ ನಿರ್ಮಿಸಿಕೊಡಲಾಗಿದೆ ಎಂದು ಡಾ.ಸಾಂಸಿ ನುಡಿದರು.

ವಿಜಯಾ ಬ್ಯಾಂಕಿನ ಸಿಎಸ್‌ಆರ್ ಯೋಜನೆಯ ವಿವರಗಳನ್ನು ನೀಡಿದ ಬ್ಯಾಂಕಿನ ಜನರಲ್ ಮ್ಯಾನೇಜರ್ ಎ.ಸಿ.ಸ್ವಾನಿ, ಬ್ಯಾಂಕ್ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಕ ವಾಗಿ ನಿರ್ವಹಿಸಲು ದೇಶಾದ್ಯಂತ ಈ ನಿಧಿಯಡಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಈ ವರ್ಷ ಒಟ್ಟು 1132 ಬಾಲಕಿಯರನ್ನು ದತ್ತು ಸ್ವೀಕರಿಸುವ ಗುರಿಯಿದ್ದು, ಅದರಲ್ಲಿ ಈವರೆಗೆ 822 ಮಂದಿಯನ್ನು ದತ್ತು ಸ್ವೀಕರಿಸಲಾಗಿದೆ. ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಗೆ ಮುನ್ನ ಈ ಗುರಿ ಮುಟ್ಟಲು ಯೋಜಿಸಲಾಗಿದೆ. ಎಲ್‌ಕೆಜಿಯಿಂದ ಬಡ ಕುಟುಂಬದ ಮಕ್ಕಳನ್ನು ಇದರಲ್ಲಿ ಬ್ಯಾಂಕ್ ದತ್ತು ಸ್ವೀಕರಿಸಿ ಅವರಿಗೆ ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತಿದೆ ಎಂದರು.

ಆರೋಗ್ಯ ಕ್ಷೇತ್ರದಡಿ ದೇಶಾದ್ಯಂತ ಗ್ರಾಮೀಣ ಭಾಗದಲ್ಲಿ 32 ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ನುರಿತ ವೈದ್ಯರನ್ನು ನೇಮಿಸಿ ಗ್ರಾಮೀಣ ಭಾಗದ ಜನತೆಗೆ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಇದಕ್ಕೆ 1.25 ಕೋಟಿ ರೂ. ಖರ್ಚು ಮಾಡುತಿದ್ದೇವೆ. ಮಧ್ಯಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಎಂಟು ಕಡೆಗಳಲ್ಲಿ ತಲಾ 1.25 ಲಕ್ಷ ರೂ.ವೆಚ್ಚದಲ್ಲಿ ಬೋರ್‌ವೆಲ್ ಗಳನ್ನು ಕೊರೆದು ಕುಡಿಯುವ ನೀರನ್ನು ಗ್ರಾಮಸ್ಥರಿಗೆ ನೀಡುತಿದ್ದೇವೆ ಎಂದು ಸ್ವಾನಿ ವಿವರಿಸಿದರು. ಬಳ್ಳಾರಿಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸರಬರಾಜು ಮಾಡುತ್ತಿರುವ ಇಸ್ಕಾನ್‌ಗೆ ಚಪಾತಿ ಲಟ್ಟಿಸುವ ಯಂತ್ರವನ್ನು ನೀಡಿದ್ದೇವೆ. ಶಿರೂರಿನ ಶಾಲೆಗೆ ಶಾಲಾ ಬಸ್‌ನ್ನು ನೀಡಿದ್ದೇವೆ ಎಂದರು.

ಬ್ಯಾಂಕಿನ ಉಡುಪಿ ವಲಯದ ಡಿಜಿಎಂ ಎಂ.ಜೆ.ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿ, ಯೋಜನೆಯ ಕುರಿತು ವಿವರಿಸಿದರು. ಚೀಫ್ ಮ್ಯಾನೇಜರ್ ನರೇಂದ್ರ ವಂದಿಸಿದರೆ, ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News