×
Ad

ಭಾರತ-ಪಾಕ್ ಗಡಿಯಲ್ಲಿ ಮಾನವ ರಹಿತ ವಿಮಾನಗಳ ಹಾರಾಟ: ಬಿಎಸ್‌ಎಫ್

Update: 2016-10-04 22:39 IST

ಹೊಸದಿಲ್ಲಿ, ಅ.4: ಭಾರತ ನಡೆಸಿದ ಸೀಮಿತ ದಾಳಿಯ ಹಿನ್ನೆಲೆಯಲ್ಲಿ ಪಶ್ಚಿಮ ಮುಂಚೂಣಿಯಲ್ಲಿ ಉದ್ವಿಗ್ನತೆ ನೆಲೆಸಿದೆ. ಇತ್ತೀಚೆಗೆ ಭಾರತ-ಪಾಕ್ ಗಡಿಗೆ ಅತಿ ಸಮೀಪದಲ್ಲಿ ಯುಎವಿಗಳ ಚಲನವಲನವನ್ನು ತಾನು ಗಮನಿಸಿದ್ದೇನೆಂದು ಭಾರತೀಯ ಗಡಿ ರಕ್ಷಣಾ ದಳ(ಬಿಎಸ್‌ಎಫ್) ಇಂದು ಹೇಳಿದೆ.

ಸಮಗ್ರ ಭದ್ರತೆಯನ್ನು ಬಿಗಿಗೊಳಿಸುವ ಕ್ರಮವಾಗಿ ಗಡಿರಕ್ಷಣಾ ದಳವು, ಬಾಂಗ್ಲಾ ದೇಶದ ಮೂಲಕ ಭಯೋತ್ಪಾದಕರು ಭಾರತಕ್ಕೆ ನುಸುಳಿ ದಾಳಿ ನಡೆಸುವುದನ್ನು ತಡೆಯಲು ಅದ ರೊಂದಿಗಿನ ಪೂರ್ವ ಮುಂಚೂಣಿ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯ ಸಿದ್ಧತೆಯನ್ನು ಪರಿಶೀಲಿಸಿದೆ.
 ಪಶ್ಚಿಮ ಮುಂಚೂಣಿಯಲ್ಲಿ ಸಮಗ್ರ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಎಲ್ಲ ಭದ್ರತಾ ಮತ್ತು ರಕ್ಷಣಾ ದಳಗಳ ಸಂಸ್ಥಾಪನೆಗಳು ಕಟ್ಟೆಚ್ಚರದಲ್ಲಿವೆ. ಪಶ್ಚಿಮದ ಗಡಿಯಲ್ಲಿ ಉದ್ವಿಗ್ನತೆ ನೆಲೆಸಿದೆ. ನಿಯಂತ್ರಣ ರೇಖೆಯಲ್ಲಿ ತಾವು ಪಾಕಿಸ್ತಾನದೊಂದಿಗೆ ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗುತ್ತದೆ. ಆ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಿರು ತ್ತದೆಂದು ಬಿಎಸ್‌ಎಫ್‌ನ ಮಹಾ ನಿರ್ದೇಶಕ ಕೆ.ಕೆ. ಶರ್ಮಾ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಬಿಎಸ್‌ಎಫ್ ಹಾಗೂ ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ನಡುವಿನ ಅರ್ಧವಾರ್ಷಿಕ ಮಾತುಕತೆ ಇಂದು ಮುಕ್ತಾಯಗೊಂಡಿದೆ. ಎರಡೂ ಪಡೆಗಳು, ಸರ್ಜಿಕಲ್ ದಾಳಿಯ ಬಳಿಕದ ಪರಿಸ್ಥಿತಿಯ ಕುರಿತಾಗಿಯೂ ಅವಲೋಕನ ನಡೆಸಿದ್ದು, ಕಟ್ಟೆಚ್ಚರದಲ್ಲಿವೆಯೆಂದು ಅವರು ಹೇಳಿದರು.
ಭಯೋತ್ಪಾದಕರು ಬಾಂಗ್ಲಾದೇಶದ ಭೂಪ್ರದೇಶವನ್ನು ಉಪಯೋಗಿಸುವ ಬಗ್ಗೆ ಹೊಸ ಮಾಹಿತಿಯೇನೂ ಬಂದಿಲ್ಲ. ಆದಾಗ್ಯೂ, ಭಾರತ-ಬಾಂಗ್ಲಾದೇಶ ಗಡಿಯಲ್ಲೂ ಕಣ್ಗಾವಲನ್ನು ತೀವ್ರಗೊಳಿಸಲಾಗಿದೆಯೆಂದು ಶರ್ಮಾ ತಿಳಿಸಿದರು.
ಗಡಿಗೆ 100 ಮೀ. ಸಮೀಪದ ವರೆಗೆ ಮಾನವ ರಹಿತ ವಿಮಾನಗಳು(ಯುಎಎ) ಬಂದುದನ್ನು ತಾವು ಕಂಡಿದ್ದೇವೆ. ಬಹುಶಃ ಪಾಕಿಸ್ತಾನ ನಮ್ಮ ಸಿದ್ಧತೆಯನ್ನು ಪರಿಶೀಲಿಸಲು ಬಯಸಿರಬೇಕು. ಆದರೆ, ತಾವು ಅವರಿಗೆ ಸೂಕ್ತ ಉತ್ತರ ನೀಡಲು ಸರ್ವ ಸಿದ್ಧತೆಯಲ್ಲಿದ್ದೇವೆ ಹಾಗೂ ಭಯೋತ್ಪಾದಕರ ಯಾವುದೇ ದುಷ್ಟ ಸಂಚನ್ನು ನಡೆಯಗೊಡುವುದಿಲ್ಲವೆಂದು ಭರವಸೆ ನೀಡುತ್ತೇನೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News