ಮಿತ್ತಬೈಲ್: ಎಸ್ಕೆಎಸ್ಸೆಸ್ಸೆಫ್ ಸಹಚಾರಿ ಸೆಂಟರ್ ಉದ್ಘಾಟನೆ
ಬಂಟ್ವಾಳ, ಅ.4: ಎಸ್ಕೆಎಸ್ಸೆಸ್ಸೆಫ್ ವಿಖಾಯ ದಿನದ ಪ್ರಯುಕ್ತ ಬಂಟ್ವಾಳ ವಲಯ ವತಿಯಿಂದ ಮಿತ್ತಬೈಲ್ ಮಸೀದಿಯ ವಠಾರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಸಹಚಾರಿ ಸೆಂಟರ್‌ಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಬಡವರ ಏಳಿಗೆಗಾಗಿ ಎಸ್ಕೆಎಸ್ಸೆಸ್ಸೆಫ್ ಮಾಡುತ್ತಿರುವ ಸಮಾಜ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಎಸ್ಕೆಎಸ್ಸೆಸ್ಸೆಫ್ ಮಾಡುತ್ತಿರುವ ಸಮಾಜ ಸೇವೆಗೆ ನಮ್ಮಿಂದಾಗುವ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಂದರ್ ಕೇಂದ್ರ ಜುಮಾ ಮಸೀದಿಯ ಖತೀಬ್ ವಿ.ಕೆ ಸದಖತುಲ್ಲಾ ಫೈಝಿ ಎಸ್ಕೆಎಸ್ಸೆಸ್ಸೆಫ್ ಸಹಚಾರಿ ಸೆಂಟರ್ ಬಗ್ಗೆ ವಿವರಿಸಿ ಮಾತನಾಡಿ, ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆ, Skssfviqaya.in ವೆಬ್ಸೈಟ್ ಮುಖಾಂತರ ರಕ್ತದಾನ ನೀಡಲು ಸಜ್ಜಾಗಿರುವ ರಕ್ತದಾನಿಗಳ ವಿವರ, ಅಪಘಾತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಅಲರ್ಟ್ ಎಂಬ ಸ್ವಯಂ ಸೇವಕರ ತಂಡ, ಲಹರಿ ವಿರುದ್ಧ ಅಭಿಯಾನ, ಮೊಹಲ್ಲಾ ಕೇಂದ್ರೀಕರಿಸಿ (ಚಾರಿಟಿ) ರಿಲೀಫ್ ಸೆಲ್ ಗಳ ಕ್ರಿಯಾತ್ಮಕ ಸೇವೆ, ಸರಕಾರಿ ಹಾಗೂ ಸರಕಾರೇತರ ಸೌಲಭ್ಯಗಳ ಮಾಹಿತಿ, ಮಯ್ಯತ್ತ್ ಪರಿಪಾಲನೆ ಮಾಡುವ ತಂಡವನ್ನು ಸಮುದಾಯಕ್ಕೆ ಅರ್ಪಿಸಲಿದೆ ಎಂದು ತಿಳಿಸಿದರು.
ನಂತರ ಸಮಾಜ ಸೇವಕರನ್ನು ಗುರುತಿಸಿ ಸ್ಮರಣಿಕೆ ನೀಡಲಾಯಿತು. ಸಿದ್ದೀಕ್ ಅಬ್ದುಲ್ ಬಂಟ್ವಾಳ ಸ್ವಾಗತಿಸಿದರು. ಟಿ.ಎಂ.ಹನೀಫ್ ಮೌಲವಿ ವಂದಿಸಿದರು. ಕಮರುದ್ದೀನ್ ಫರಂಗಿಪೇಟೆ ಕಾರ್ಯಕ್ರಮ ನಿರೂಪಿಸಿದರು.