ಯುಪಿಎ ಅವಧಿಯಲ್ಲಿ ನಡೆದ ಎಲ್ಒಸಿ ದಾಳಿಗಳ ದಿನಾಂಕ ಬಿಡುಗಡೆ ಮಾಡಿದ ಕಾಂಗ್ರೆಸ್
ಹೊಸದಿಲ್ಲಿ, ಅ.5: ಇತ್ತೀಚೆಗೆ ಗಡಿ ನಿಯಂತ್ರಣ ರೇಖೆಯಾಚೆಗೆ ನಡೆಸಲಾದ ಸೀಮಿತ ದಾಳಿಗಳನ್ನು ರಾಜಕೀಕರಣಗೊಳಿಸದಂತೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರಕ್ಕೆ ಕಾಂಗ್ರೆಸ್ ಸಲಹೆ ನೀಡಿದೆಯಲ್ಲದೆ, ಯುಪಿಎ ಸರಕಾರದ ಅವಧಿಯಲ್ಲಿ ನಡೆಸಲಾದ ಗಡಿಯಾಚೆಗಿನ ದಾಳಿಗಳ ದಿನಾಂಕ ಮತ್ತು ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಈ ಹಿಂದೆ 2011ರ ಸೆಪ್ಟೆಂಬರ್ 1, 2013ರ ಜುಲೈ 28 ಹಾಗೂ 2014 ರ ಜನವರಿ 14ರಂದು ಸೇನೆ ಯಶಸ್ವಿಯಾಗಿ ಇಂತಹ ಸೀಮಿತ ದಾಳಿಗಳನ್ನು ನಡೆಸಿತ್ತೆಂದು ಮುಖ್ಯ ವಿಪಕ್ಷವಾದ ಕಾಂಗ್ರೆಸ್ ಹೇಳಿದೆ.
‘‘ತನ್ನ ಪ್ರಬುದ್ಧ ನಿರ್ಧಾರದಿಂದ ಹಾಗೂ ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ಅಂದಿನ ಯುಪಿಎ ಸರಕಾರ ಈ ಮಾಹಿತಿಗಳನ್ನು ಬಹಿರಂಗಗೊಳಿಸಿಲ್ಲ ಹಾಗೂ ರಾಜಕೀಯ ನಾಯಕತ್ವದ ಸಂಪೂರ್ಣ ಸಹಕಾರದಿಂದ ಸೇನೆ ಈ ದಾಳಿಗಳನ್ನು ನಡೆಸಿತ್ತೆಂದು ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ 2011ರ ಆಗಸ್ಟ್ 1ರಂದು ರಾಜ್‌ಪುತ್ ರೆಜಿಮೆಂಟಿನ ಹವಲ್ದಾರ್ ಜೈಪಾಲ್ ಸಿಂಗ್ ಅಧಿಕಾರಿ ಮತ್ತು ಲಾನ್ಸ್ ನಾಯ್ಕ್ ದೇವೇಂದರ್ ಸಿಂಗ್‌ಅವರನ್ನು ಕುಪ್ವಾರದಲ್ಲಿ ಗಡಿಯಾಚೆ ನಡೆದ ದಾಳಿಯಲ್ಲಿ ಶಿರಚ್ಛೇದಗೊಳಿಸಿದ ಪ್ರಕರಣದ ನಂತರ 2011 ರ ಸೆಪ್ಟೆಂಬರ್ 1ರಂದು ಸೀಮಿತ ದಾಳಿ ನಡೆದಿತ್ತು. ಅಂತೆಯೇ ಜನವರಿ 8, 2013ರಲ್ಲಿ ಪಾಕಿಸ್ತಾನಿ ಸೇನೆ ಲಾನ್ಸ್ ನಾಯ್ಕ್‌ಹೇಮರಾಜ್ ಸಿಂಗ್ ಅವರನ್ನುಹಾಗೂ ಇನ್ನೊಬ್ಬ ಯೋಧನನ್ನು ಮೇಂಧ ಸೆಕ್ಟರ್ ನಲ್ಲಿ ಗುಂಡಿಕ್ಕಿ ಕೊಂದ ನಂತರ, 2013ರ ಜುಲೈ 28ರಂದು ಸೀಮಿತ ದಾಳಿಗಳು ನಡೆದಿದ್ದವು. ಅಂತೆಯೇ, 2013ರ ಆಗಸ್ಟ್ 6ರಂದು ಪಾಕಿಸ್ತಾನಿ ಸೇನೆಪೂಂಚ್ ಸೆಕ್ಟರ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದು ಮಂದಿ ಸೈನಿಕರನ್ನು ಕೊಂದ ನಂತರದ ಬೆಳವಣಿಗೆಗಳಲ್ಲಿ 2014 ರ ಜನವರಿ 14ರಂದು ಸೀಮಿತ ದಾಳಿ ನಡೆದಿತ್ತೆಂದು ಕಾಂಗ್ರೆಸ್ ಹೇಳಿದೆ.