ಅ.9ರಂದು ಕೊಂಕಣಿ ಪ್ರಚಾರ ಸಂಚಾಲನದ ದಶಮಾನೋತ್ಸವ ಕಾರ್ಯಕ್ರಮ

Update: 2016-10-05 08:35 GMT

ಮಂಗಳೂರು, ಅ.5: ಶಾಲೆಗಳಲ್ಲಿ ಕೊಂಕಣಿ ಕಲಿಕೆ ಬಗ್ಗೆ ಕೆಲಸ ಮಾಡಲು 2006ರಲ್ಲಿ ಸ್ಥಾಪಿಸಲಾದ ಕೊಂಕಣಿ ಪ್ರಚಾರ ಸಂಚಾಲನ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಅ. 9ರಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲನದ ಅಧ್ಯಕ್ಷ ಲಾರೆನ್ಸ್ ಡಿಸೋಜಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಅಂದು ಸಂಜೆ 5 ಗಂಟೆಗೆ ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಶಾಸಕ ಜೆ.ಆರ್ ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಗೋವಾದ ಪ್ರಸಿದ್ಧ ಹಾಸ್ಯಗಾರ ಪ್ರಿನ್ಸ್ ಜೇಕಬ್‌ ಬರೆದು ನಟಿಸಿರುವ ‘ಪಾದ್ರಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಕೊಂಕಣಿ ಪ್ರಚಾರ ಸಂಚಾಲನವು ಶಾಲೆಗಳ ಭೇಟಿ, ಕೊಂಕಣಿ ಶಿಕ್ಷಣ ಜಾಗೃತಿ ಅಭಿಯಾನಗಳು, ಕೊಂಕಣಿ ಶಿಕ್ಷಕರಿಗೆ ಪೂರಕ ತರಬೇತಿ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಚಿತ ಪಠ್ಯ ಪುಸ್ತಕ ವಿತರಣೆ, ಶಿಕ್ಷಕರ ವಾರ್ಷಿಕ ಸಮಾವೇಶದ ಮೂಲಕ ಶಾಲೆಗಳಲ್ಲಿ ಕೊಂಕಣಿ ಪಠ್ಯಕ್ಕೆ ಒತ್ತು ನೀಡಿದೆ ಎಂದು ಲಾರೆನ್ಸ್ ತಿಳಿಸಿದರು.

ರೋಮಿ ಲಿಪಿಯಲ್ಲೂ ಪಠ್ಯದ ಅಗತ್ಯವಿದೆ!

ಸದ್ಯ ಶಾಲೆಗಳಲ್ಲಿ ಐಚ್ಚಿಕ ಭಾಷೆಯಾಗಿ ಕೊಂಕಣಿಯನ್ನು ದೇವನಗರಿ ಹಾಗೂ ಕನ್ನಡ ಲಿಪಿಯ ಮೂಲಕ ಕಲಿಸಲಾಗುತ್ತಿದೆ. ಕೊಂಕಣಿ ಪಠ್ಯದ ಬಗ್ಗೆ ಆಸಕ್ತಿಯನ್ನು ಉಳಿಸಲು ಹಾಗೂ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ರೋಮಿ ಲಿಪಿಯಲ್ಲೂ ಪಠ್ಯವನ್ನು ನಡೆಸುವ ಅಗತ್ಯವಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೋ ಅಭಿಪ್ರಾಯಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕೊಂಕಣಿ ಭಾಷೆ ಕಲಿಕೆಗೆ ಏಕರೀತಿಯ ಲಿಪಿಯನ್ನು ಅನ್ವಯಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತವಲ್ಲ. ಈಗ ಕೊಂಕಣಿ ಭಾಷೆ ಕಲಿಯಲು ಮುಂದಾಗಿರುವ ಮಕ್ಕಳ ಆಸಕ್ತಿಯನ್ನು ಉಳಿಸಿ, ಪ್ರೋತ್ಸಾಹಿಸಬೇಕಾದರೆ ರೋಮಿ ಲಿಪಿಯನ್ನೂ ಅಳವಡಿಸುವುದು ಉತ್ತಮ ಎಂದವರು ಹೇಳಿದರು.

ಪ್ರಸ್ತತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಎಂಎ ಸ್ನಾತಕೋತ್ತರ ಪದವಿಗೆ 7 ಮಂದಿ ವಿದ್ಯಾರ್ಥಿಗಳು ಆಸಕ್ತಿ ತೋರಿ ಕಲಿಯುತ್ತಿದ್ದಾರೆ. ವಿವಿಯಿಂದ ಹಗಲು ಹೊತ್ತಿನಲ್ಲಿ ತರಗತಿಗೆ ಅನುಮತಿ ದೊರಕಿದೆಯಾದರೂ ಸದ್ಯ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಸಂಧ್ಯಾ ಕಲಿಕೆಯ ಮೂಲಕ ಕೊಂಕಣಿ ಸ್ನಾತಕೋತ್ತರ ಪದವಿ ಆರಂಭಗೊಂಡಿದೆ. ಮುಂದೆ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರ್ಪಡಿಸಿದ್ದಲ್ಲಿ ಹಗಲು ಹೊತ್ತಿಗೂ ಈ ಕೊಂಕಣಿ ಎಂಎಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕೊಂಕಣಿ ಪ್ರಚಾರ ಸಂಚಾಲನದ ಸದಸ್ಯ ಎರಿಕ್ ಒಝಾರಿಯೊ, ಕಾರ್ಯದರ್ಶಿ ಜೇಮ್ಸ್ ಡಿಸೋಜಾ, ಕೊಂಕಣಿ ಶಿಕ್ಷಣ ಸಂಯೋಜಕ ಫಾ. ಆಲ್ವಿನ್ ಸೆರಾವೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News