ಕಲಾವಿದರ ಕೈಗೆಟಕುತ್ತಿಲ್ಲ ಮಂಗಳೂರು ಪುರಭವನ!
ಮಂಗಳೂರು, ಅ.5: ತುಳುನಾಡಿನಲ್ಲಿ ನಾಟಕ, ಯಕ್ಷಗಾನ ಸೇರಿದಂತೆ ಕಲಾವಿದರಿಗೆ ಅನ್ನದ ಬಟ್ಟಲಾಗಿದ್ದ, ಪ್ರೋತ್ಸಾಹದ ತಾಣವಾಗಿದ್ದ ಪುರಭವನ ಇಂದು ಕಲಾವಿದರ ಕೈಗೆಟಕದಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ನಗರದಲ್ಲಿ ಸೂಕ್ತ ರಂಗ ಮಂದಿರದ ಕೊರತೆಯಿಂದಾಗಿ ಕಲಾವಿದರ ಪಾಡನ್ನು ಕೇಳುವವರಿಲ್ಲದಂತಾಗಿದೆ.
ಈ ಮಾತು ತುಳು ರಂಗಭೂಮಿಯ ತೆಲಿಕೆದ ಬೊಳ್ಳಿ, ಖ್ಯಾತ ಹಾಸ್ಯ ಕಲಾವಿದ, ಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರ ಬೇಸರದ ನುಡಿಗಳು.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ತಮ್ಮ ಹೊಸ ತುಳು ಚಿತ್ರದ ಕುರಿತಂತೆ ಮಾತನಾಡುವ ಸಂದರ್ಭ ತುಳು ನಾಟಕಗಳು ಕಡಿಮೆಯಾಗುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಟಕ ಪ್ರದರ್ಶನಕ್ಕೆ ಪುರಭವನದ ಶುಲ್ಕವು 30 ಸಾವಿರ ರೂ.ನಿಂದ 40,000 ರೂ.ವರೆಗೆ ಏರಿಕೆಯಾಗಿದೆ. ಪುರಭವನವೇನೋ ಸುಂದರವಾಗಿದೆ. ಆದರೆ ಹಿಂದೆ ವಾರದಲ್ಲಿ ನಾಲ್ಕೈದು ನಾಟಕ ಪ್ರದರ್ಶನಗಳನ್ನು ನೀಡುತ್ತಿದ್ದ ಕಲಾವಿದರಿಗೆ ಇಂದು ಅದು ಕೈಗೆಟುಕದಂತಾಗಿದೆ. ನಾಟಕ ಮಾಡುವವರು ಸೌಂಡ್ ವ್ಯವಸ್ಥೆ ಮಾಡುವಂತಿಲ್ಲ. ಆದರೆ ಅಲ್ಲಿ ಅಳವಡಿಸಿರುವ ಸೌಂಡ್ ವ್ಯವಸ್ಥೆಯಿಂದ ಪ್ರೇಕ್ಷಕರಿಗೆ ಕೇಳುವುದೇ ಇಲ್ಲ. ಇನ್ನು ಬೆಳಕಿನ ವ್ಯವಸ್ಥೆ ಅತೀ ಎತ್ತರದಲ್ಲಿದ್ದು, ನಾಟಕ ಮಾಡುವ ಕಲಾವಿದರನ್ನು ಪ್ರೇಕ್ಷಕರು ಟಾರ್ಚ್ ಹಿಡಿದು ನೋಡಬೇಕಾಗಿದೆ. ಒಟ್ಟಿನಲ್ಲಿ ಕಲಾವಿದರು ಮಾತ್ರ ನಗರದಲ್ಲಿ ಸೂಕ್ತ ಪರ್ಯಾಯ ರಂಗ ಮಂದಿರವೊಂದರ ವ್ಯವಸ್ಥೆ ಇಲ್ಲದೆ ಬಯಲು ರಂಗ ಮಂದಿರವನ್ನೇ ನೆಚ್ಚಿಕೊಳ್ಳುವಂತಾಗಿದೆ.
‘‘ನಾವೇನೋ ರಂಗ ಮಂದಿರದಲ್ಲಿ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ, ಹೊಸ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯಂತ ಸುಲಭವದಲ್ಲಿ ಲಭ್ಯವಾಗುತ್ತಿದ್ದ ಪುರಭವನ ಇಂದು ಮರೀಚಿಕೆಯಾಗಿದೆ. ಇದು ನಿಜಕ್ಕೂ ತುಳು ರಂಗಭೂಮಿಗೆ ಆಗಿರುವ ದೊಡ್ಡ ಹೊಡೆತ’’ ಎಂದು ದೇವದಾಸ್ ಕಾಪಿಕಾಡ್ ಬೇಸರ ವ್ಯಕ್ತಪಡಿಸಿದರು.
‘‘ನಾವೆಲ್ಲಾ ಕಲಾ ರಂಗಕ್ಕೆ ಪ್ರವೇಶ ಮಾಡುವ ಸಂದರ್ಭ ಈ ಪುರಭವನ ನಮ್ಮ ಪಾಲಿನ ಅನ್ನದ ಬಟ್ಟಲಾಗಿತ್ತು. ಆದರೆ ಪ್ರಸಕ್ತ ಕಲಾವಿದರಿಗೆ ಅದು ಕೈಗೆಟುಕದಂತಾಗಿದೆ. ದಾವಣಗೆರೆಯಂತಹ ಜಿಲ್ಲೆಯಲ್ಲೂ ರಂಗ ಕಲಾವಿದರಿಗೆ ಸೂಕ್ತ ರಂಗ ಮಂದಿರದ ವ್ಯವಸ್ಥೆ ಇದೆ. ಆದರೆ, ತುಳುನಾಡಿನ ರಂಗ ಕಲಾವಿದರಿಗೆ ಮಾತ್ರ ಭಾರೀ ಅನ್ಯಾಯವಾಗುತ್ತಿದೆ ’’ ಎಂದು ಅವರು ಹೇಳಿದರು.