ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದ ‘ನಾಗರಾಜ’
ಪುತ್ತೂರು, ಅ.5: ನಾಗರ ಹಾವೊಂದು ಪ್ರತ್ಯಕ್ಷವಾಗಿ ಜನರಲ್ಲಿ ಗಾಬರಿ ಮೂಡಿಸಿದ ಘಟನೆ ಬುಧವಾರ ಮಧ್ಯಾಹ್ನ ಪುತ್ತೂರು ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಬಳಿಯಲ್ಲಿ ನಡೆಯಿತು.
ಪುತ್ತೂರು ಸರಕಾರಿ ಆಸ್ಪತ್ರೆಯ ಪ್ರವೇಶ ದ್ವಾರದ ಪಕ್ಕದ ಕಟ್ಟಡದಲ್ಲಿರುವ ರಕ್ತನಿಧಿ ಕೇಂದ್ರದ ಬಳಿ ಬುಧವಾರ ಮಧ್ಯಾಹ್ನ ನಾಗರ ಹಾವೊಂದು ಅತ್ತಿಂದಿತ್ತ ತಿರುಗಾಡುತ್ತಿತ್ತು. ನಾಗರ ಹಾವನ್ನು ಕಂಡ ವ್ಯಕ್ತಿಯೊಬ್ಬರು ಈ ವಿಚಾರದನ್ನು ಅಕ್ಕಪಕ್ಕದಲ್ಲಿದ್ದ ಮಂದಿಗೆ ತಿಳಿಸಿದ್ದರು. ನಾಗರ ಹಾವನ್ನು ನೋಡಲು ಜಮಾಯಿಸತೊಡಗಿದ ವೇಳೆಯೇ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಪೈಪೊಂದನ್ನು ಹಿಡಿದುಕೊಂಡು ಬಂದು ಅದರ ಮೂಲಕ ಹಿಡಿಯಲು ಪ್ರಯತ್ನಿಸಿದ್ದು ಹಾವಿನ ರೋಷಕ್ಕೂ ಕಾರಣವಾಯಿತು. ಆಸ್ಪತ್ರೆಯ ಸಿಬ್ಬಂದಿ ಪೈಪಿನ ಮೂಲಕ ಹಿಡಿಯಲು ಪ್ರಯತ್ನಿಸಿ, ಪೈಪನ್ನು ತಾಗಿಸಿದ ತಕ್ಷಣ ರೋಷಗೊಂಡ ನಾಗರ ಹಾವು ಹೆಡೆಯೆತ್ತಿ ಭುಸುಗುಟ್ಟಲಾರಂಭಿಸಿತು. ಮಾತ್ರವಲ್ಲದೆ ಹೆಡೆ ಎತ್ತಿ ಅಲ್ಲೇ ನಿಲ್ಲುವ ಮೂಲಕ ಅಲ್ಲಿ ಸೇರಿದ್ದ ಮಂದಿಯನ್ನು ಗಾಬರಿಗೊಳಿಸಿತು.
ಬಳಿಕ ಆಸ್ಪತ್ರೆಯ ಸಿಬ್ಬಂದಿ ಈ ವಿಚಾರವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು. ವೈದ್ಯಾಧಿಕಾರಿಗಳು ಕರೆ ಮಾಡಿ ಪುತ್ತೂರಿನ ಉರಗತಜ್ಞ ಡಾ.ರವೀಂದ್ರನಾಥ ಐತಾಳ್ ಅವರನ್ನು ಸ್ಥಳಕ್ಕೆ ಕರೆಸಿದರು. ಡಾ.ಐತಾಳ್ ಅವರು ಹಾವನ್ನು ಸುಲಭವಾಗಿಯೇ ಹಿಡಿದು ಪ್ಲಾಸ್ಟಿಕ್ ಬಾಟಲಿಯೊಂದಕ್ಕೆ ತುಂಬಿಸಿ ಜನರ ಭಯವನ್ನು ನಿವಾರಿಸಿದರು. ಬಳಿಕ ಹಾವನ್ನು ಅರಣ್ಯಕ್ಕೆ ಬಿಡಲಾಯಿತು.