ಸೇನೆಯಿಂದ ಸರಕಾರಕ್ಕೆ ವೀಡಿಯೊ ತುಣುಕುಗಳ ಹಸ್ತಾಂತರ: ಅಹೀರ್
ಹೊಸದಿಲ್ಲಿ,ಅ.5: ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯ ಭಯೋತ್ಪಾದಕರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿಗಳ ಸಾಕ್ಷವನ್ನು ತೋರಿಸುವಂತೆ ಹೆಚ್ಚುತ್ತಿರುವ ಆಗ್ರಹದ ನಡುವೆಯೇ ಕೇಂದ್ರ ಸಹಾಯಕ ಗೃಹಸಚಿವ ಹಂಸರಾಜ್ ಅಹೀರ್ ಅವರು, ಸ್ಥಾಪಿತ ಪದ್ಧತಿಯಂತೆ ಸೇನೆಯು ಕಾರ್ಯಾಚರಣೆಯ ವೀಡಿಯೊ ತುಣುಕುಗಳನ್ನು ಸರಕಾರಕ್ಕೆ ಹಸ್ತಾಂತರಿಸಿದೆ ಎಂದು ಬುಧವಾರ ಇಲ್ಲಿ ತಿಳಿಸಿದರು.
ಇಂತಹ ವಿಷಯಗಳನ್ನು ನಿರ್ವಹಿಸಲು ಅದರದ್ದೇ ಆದ ವಿಧಿವಿಧಾನಗಳಿವೆ ಮತ್ತು ಸೇನೆ ಹಾಗೂ ಸರಕಾರ ಅವುಗಳನ್ನು ಪಾಲಿಸಿವೆ ಎಂದು ಹೇಳಿದ ಅವರು, ಸರ್ಜಿಕಲ್ ದಾಳಿಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು ರಕ್ಷಣಾ ಸಚಿವರಾಗಲೀ ಸರಕಾರವಾಗಲೀ ಅಲ್ಲ. ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ(ಡಿಜಿಎಂಒ)ರು ಆ ಕರ್ತವ್ಯ ನಿರ್ವಹಿಸಿದ್ದರು. ಅದನ್ನು ಸೇನೆಯೇ ಮಾಡಬೇಕಾಗಿತ್ತು ಮತ್ತು ಆ ಕರ್ತವ್ಯ ವನ್ನು ಸೇನೆಯು ನಿರ್ವಹಿಸಿದೆ ಎಂದರು.
ಅದೊಂದು ಕಾಲವಿತ್ತು,ಲಿಖಿತ ದಾಖಲೆಗಳನ್ನು ಸಲ್ಲಿಸಲಾಗುತ್ತಿತ್ತು. ಈಗ ವೀಡಿಯೊ ತುಣುಕುಗಳನ್ನು ಸಲ್ಲಿಸಲಾಗುತ್ತದೆ ಮತ್ತು ಅವುಗಳನ್ನು ಸರಕಾರಕ್ಕೆ ನೀಡಲಾಗಿದೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಿಳಿಸಿದರು.
ಸರ್ಜಿಕಲ್ ದಾಳಿಗಳು ನಕಲಿ ಎಂದು ಮುಂಬೈ ಕಾಂಗ್ರೆಸ್ ವರಿಷ್ಠ ಸಂಜಯ ನಿರುಪಮ್ ನಿನ್ನೆ ಟೀಕಿಸಿದ್ದು ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿತ್ತು. ಇದನ್ನು ಬಿಜೆಪಿಯು ಕಟುವಾಗಿ ಖಂಡಿಸಿತ್ತು. ಅಲ್ಲದೇ ಕಾಂಗ್ರೆಸ್ ಕೂಡ ಈ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿತ್ತು. ಸರ್ಜಿಕಲ್ ದಾಳಿಗಳು ನಡೆದಿವೆ ಎನ್ನುವುದಕ್ಕೆ ಸಾಕ್ಷವನ್ನು ಕೇಳಿದ್ದ ನಿರುಪಮ್, ಈ ವಿಷಯದಲ್ಲಿ ಬಿಜೆಪಿಯು ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಸರ್ಜಿಕಲ್ ದಾಳಿಗಳು ನಡೆದೇ ಇಲ್ಲ ಎಂಬ ಪಾಕಿಸ್ತಾನದ ಸುಳ್ಳನ್ನು ಬಯಲಿಗೆಳೆಯಲು ನಿಯಂತ್ರಣ ರೇಖೆಯಾಚೆಯ ಕಾರ್ಯಾಚರಣೆಯ ಸಾಕ್ಷವನ್ನು ಬಿಡುಗಡೆಗೊಳಿಸುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಮೋದಿಯವರನ್ನು ಆಗ್ರಹಿಸಿದ್ದರು.
ಇದೇ ವೇಳೆ ಕೇಂದ್ರ ಸಚಿವೆ ಉಮಾ ಭಾರತಿ ಅವರು,ಸೇನೆಯ ಸರ್ಜಿಕಲ್ ದಾಳಿಗಳ ಬಗ್ಗೆ ಶಂಕೆಯಿರುವವರು ಪಾಕಿಸ್ತಾನದ ಪೌರತ್ವ ಪಡೆದುಕೊಳ್ಳಲಿ ಎಂದು ಹೇಳಿದ್ದರು.