ಅಂತರರಾಷ್ಟ್ರೀಯ ಮಾದಕ ದ್ರವ್ಯ ಜಾಲ: ವಾಯುಪಡೆಯ ವಿಂಗ್ ಕಮಾಂಡರ್ ಸೆರೆ

Update: 2016-10-05 14:02 GMT

ಹೈದರಾಬಾದ್,ಅ.5: ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಓರ್ವ ವಿಜ್ಞಾನಿ ಮತ್ತು ಆತನ ಪತ್ನಿ ಭಾಗಿಯಾಗಿರುವ ಅಂತರರಾಷ್ಟ್ರೀಯ ಮಾದಕ ದ್ರವ್ಯ ಜಾಲವನ್ನು ಭೇದಿಸಿ ರುವ ಮಾದಕ ದ್ರವ್ಯ ನಿಯಂತ್ರಣ ಘಟಕ(ಎನ್‌ಸಿಬಿ)ವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಜಿ.ರಾಜಶೇಖರ ಅವರನ್ನು ಬಂಧಿಸಿದೆ.

 ನಾಂದೇಡ್ ಪೊಲೀಸರ ಸಹಕಾರದೊಂದಿಗೆ ರೆಡ್ಡಿಯನ್ನು ಸೋಮವಾರ ಬಂಧಿಸಲಾಗಿದ್ದು.ಇಂದು ಹೈದರಾಬಾದ್‌ಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ಎನ್‌ಸಿಬಿ ವಶಕ್ಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ದಿಲ್ಲಿಯಲ್ಲಿ ವಾಯುಪಡೆ ಕೇಂದ್ರ ಕಚೇರಿಯಲ್ಲಿ ನಿಯೋಜಿತರಾಗಿದ್ದ ರೆಡ್ಡಿ ಮಾದಕ ದ್ರವ್ಯಜಾಲದ ‘ಕಿಂಗ್‌ಪಿನ್’ ಆಗಿದ್ದು, ಹೈದರಾಬಾದ್‌ನಲ್ಲಿ ಬಂಧಿತ ದಂಪತಿಯ ವಿಚಾರಣೆ ಸಂದರ್ಭ ಅವರ ಪಾತ್ರವು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು. ರೆಡ್ಡಿ ಬಳಿಯಿಂದ ಕೆಲವು ಮೊಬೈಲ್ ಫೋನ್‌ಗಳು ಮತ್ತು 7.5 ಲಕ್ಷ.ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ 231 ಕೆ.ಜಿ.ನಿಷೇಧಿತ ಮಾದಕ ವಸ್ತು ಆ್ಯಂಫೆಟೆಮೈನ್ ವಶಪಡಿಸಿಕೊಂಡಿದ್ದ ಎನ್‌ಸಿಬಿ, ವಿಜ್ಞಾನಿ ವೆಂಕಟ ರಾಮರಾವ್ ಮತ್ತು ಆತನ ಪತ್ನಿ ಸೇರಿದಂತೆ ಮೂವರನ್ನು ಬಂಧಿಸಿತ್ತು.ಇದಕ್ಕೂ ಮುನ್ನ ಸೆ.30ರಂದು ಇಲ್ಲಿಯ ಮಿಯಾಪುರ ಪ್ರದೇಶದಿಂದ 221 ಕೆ.ಜಿ.ಆ್ಯಂಫೆಟೆಮೈನ್ ಅನ್ನು ಎನ್‌ಸಿಬಿಯು ವಶಪಡಿಸಿಕೊಂಡಿತ್ತು.

ರವಿಶಂಕರ ರಾವ್ ಎಂಬಾತನಿಂದ ಮಾದಕ ದ್ರವ್ಯ ಪಡೆದುಕೊಳ್ಳಲೆಂದು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ರಾಸಾಯನಿಕ ಸಂಸ್ಥೆಯಲ್ಲಿ ಸಂಶೋಧಕ ವಿಜ್ಞಾನಿಯಾಗಿರುವ ವೆಂಕಟ ರಾಮರಾವ್ ಹೈದರಾಬಾದ್‌ಗೆ ಬಂದಿದ್ದ. ಅವರಿಬ್ಬರ ಬಂಧನದ ಬಳಿಕ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಸಮೀಪದ ವೆಂಕಟ ರಾಮರಾವ್‌ನ ಬಾಡಿಗೆ ಮನೆಯಿಂದ 30 ಗ್ರಾಂ ಆ್ಯಂಫೆಟೆಮೈನ್ ಮತ್ತು 1.23 ಕೋ.ರೂ.ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಆತನ ಪತ್ನಿಯನ್ನೂ ಬಂಧಿಸಲಾಗಿತ್ತು.

ಅ.1ರಂದು ಇಲ್ಲಿನ ಬೊಳ್ಳಾರಂ ಪ್ರದೇಶದಲ್ಲಿ ತಯಾರಿಕಾ ಲ್ಯಾಬ್‌ನಿಂದ 10 ಕೆ.ಜಿ.ಆ್ಯಂಫೆಟೆಮೈನ್ ವಶಪಡಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News