ದೇಶದ ಮೊದಲ ಮೆಡಿಕಲ್ ಪಾರ್ಕ್ ಸ್ಥಾಪನೆಗೆ ಸಂಪುಟದ ಹಸಿರು ನಿಶಾನೆ

Update: 2016-10-05 14:37 GMT

ಹೊಸದಿಲ್ಲಿ,ಅ.5: ದೇಶದ ಮೊದಲ ವೈದ್ಯಕೀಯ ಉಪಕರಣಗಳ ತಯಾರಿಕೆ ಪಾರ್ಕ್ ಸ್ಥಾಪನೆಗಾಗಿ ಚೆನ್ನೈ ಸಮೀಪದ ಚೆಂಗಲ್‌ಪಟ್ಟು ಎಂಬಲ್ಲಿ 330.10 ಎಕರೆ ಭೂಮಿಯನ್ನು ಉಪಗುತ್ತಿಗೆ ಆಧಾರದಲ್ಲಿ ನೀಡಲು ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಉದ್ಯಮ ಎಚ್‌ಎಲ್‌ಎಲ್ ಲೈಫ್‌ಕೇರ್‌ಗೆ ಸರಕಾರವು ಬುಧವಾರ ಹಸಿರು ನಿಶಾನೆಯನ್ನು ತೋರಿಸಿದೆ. ತನ್ಮೂಲಕ ದುಬಾರಿ ವೈದ್ಯಕೀಯ ಉಪಕರಣಗಳ ದೇಶಿಯ ತಯಾರಿಕೆಗೆ ಒತ್ತು ನೀಡಿದೆ.

ಎಚ್‌ಎಲ್‌ಎಲ್‌ನ ಶೇ.50ರಷ್ಟು ಪಾಲು ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬರಲಿರುವ ಹೊಸ ಕಂಪನಿಯೊಂದರ ಮೂಲಕ ಮೆಡಿಕಲ್ ಪಾರ್ಕ್ ತಲೆಯೆತ್ತಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಹೂಡಿಕೆದಾರರಿಗೆ ಭೂಮಿಯನ್ನು ಉಪಗುತ್ತಿಗೆ ಆಧಾರದಲ್ಲಿ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತು.

ಮೆಡಿಪಾರ್ಕ್ ಯೋಜನೆಯು ದೇಶದ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ತಯಾರಿಕಾ ಘಟಕಗಳ ಸಮೂಹವಾಗಲಿದೆ. ಕಡಿಮೆ ವೆಚ್ಚದಲ್ಲಿ ಉನ್ನತ ಉತ್ಪನ್ನಗಳ ಸ್ಥಳೀಯ ತಯಾರಿಕೆ ಉತ್ತೇಜನ ನೀಡುವುದು ಮತ್ತು ತನ್ಮೂಲಕ ವೈದ್ಯಕೀಯ ಸೇವೆಗಳನ್ನು ಕೈಗೆಟಕುವ ಬೆಲೆಗಳಲ್ಲಿ ಲಭ್ಯವಾಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಸರಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ ’ಅಭಿಯಾನಕ್ಕೆ ಪೂರಕವಾಗಿ ಮೆಡಿಪಾರ್ಕ್ ಹಂತಹಂತವಾಗಿ ಮುಂದಿನ ಏಳು ವರ್ಷಗಳಲ್ಲಿ ಪೂರ್ಣ ಗೊಳ್ಳಲಿದೆ. ಮೊದಲ ಹಂತದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಮತ್ತು ಮೂರನೇ ವರ್ಷದಿಂದ ಹೂಡಿಕೆದಾರರಿಗೆ ಭೂಮಿಯನ್ನು ಉಪಗುತ್ತಿಗೆಯ ಆಧಾರದಲ್ಲಿ ಮಂಜೂರು ಮಾಡಲಾಗುವುದು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News