×
Ad

ಮಗುಚಿ ಬಿದ್ದ ಬೋಟ್: ಮಗು ನೀರುಪಾಲು

Update: 2016-10-05 21:39 IST

ಮಂಗಳೂರು, ಅ. 6: ತಾಂತ್ರಿಕ ದೋಷಕ್ಕೆ ಒಳಗಾದ ಸ್ಪೀಡ್ ಬೋಟ್‌ವೊಂದು ಮಗುಚಿ ಬಿದ್ದ ಪರಿಣಾಮ ಮಗುವೊಂದು ನೀರುಪಾಲಾಗಿರುವ ಘಟನೆ ಬುಧವಾರ ಸಂಜೆ ಪಣಂಬೂರು ಬೀಚ್‌ನಲ್ಲಿ ನಡೆದಿದೆ.

ನಾಟೆಕಲ್ ನಿವಾಸಿ ಸನಾಯಿಲ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಶಹದನ್ (ಎರಡೂವರೆ ವರ್ಷ) ನೀರುಪಾಲಾಗಿರುವ ಮಗು. ಶಹದನ್ ಸೇರಿದಂತೆ ಕುಟುಂಬದ ಏಳು ಮಂದಿ ಪಣಂಬೂರು ಬೀಚ್‌ಗೆ ಬಂದಿದ್ದು, ಬೀಚ್‌ನಲ್ಲಿ ಸುತ್ತಾಟ ನಡೆಸಿದ ಸ್ಪೀಡ್ ಬೋಟ್‌ನಲ್ಲೂ ಸುತ್ತಾಟಕ್ಕೆ ತೆರಳಿದ್ದರು. ಸ್ಪೀಡ್ ಬೋಟ್ ತುಸು ದೂರ ತಲುಪುತ್ತಿದ್ದಂತೆ ಬೋಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರಿನ ತೆರೆಗೆ ಸಿಲುಕಿ ಬೋಟ್ ಮಗುಚಿ ಬಿದ್ದಿತ್ತು. ಆ ಕೂಡಲೇ ಮಗು ನೀರಿನ ಸೆಳೆತಕ್ಕೆ ಸಿಲುಕಿ ಹೋಗಿದ್ದು ಉಳಿದವರು ಲೈಫ್ ಜಾಕೆಟ್ ಧರಿಸಿದ್ದ ಕಾರಣದಿಂದ ಈಜುವ ಪ್ರಯತ್ನ ನಡೆಸಿದ್ದರು. ಕೂಡಲೇ ಲೈಫ್‌ಗಾರ್ಡ್ ಸಿಬ್ಬಂದಿ ಐವರನ್ನು ರಕ್ಷಿಸಿದ್ದಾರೆ. ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ.

ಬೀಚ್ ರಕ್ಷಣಾ ದಳ, ಮುಳುಗು ತಜ್ಞರು ಸಮುದ್ರದಲ್ಲಿ ಮಗುವಿನ ಪತ್ತೆಗೆ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿಲ್ಲ. ಪಣಂಬೂರು ಎಸಿಪಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೈಫ್‌ಗಾರ್ಡ್ ನಿರ್ಲಕ್ಷ: ಆರೋಪ

ತಾಂತ್ರಿಕ ದೋಷದಿಂದ ಬೋಟ್ ಮಗುಚಿ ಬಿದ್ದ ಸಂದರ್ಭದಲ್ಲಿ ಮಗು ನಾಪತ್ತೆಯಾಗಲು ಲೈಫ್‌ಗಾರ್ಡ್‌ನವರು ನಿರ್ಲಕ್ಷ,್ಯ ಕಾರಣ ಎಂಬ ಆರೋಪ ಕುಟುಂಬದ ಸದಸ್ಯರಿಂದ ಕೇಳಿ ಬಂದಿದೆ.

ಸ್ಪೀಡ್ ಬೋಟ್ ಕೇವಲ ಕೆಲವೇ ಮೀಟರ್ ದೂರ ಹೋಗಿದ್ದು, ಲೈಫ್‌ಗಾರ್ಡ್‌ನವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ ಮಗುವನ್ನು ರಕ್ಷಿಸಬಹುದಿತ್ತು. ಆದರೆ, ಅವರು ವಿಳಂಬ ಮಾಡಿದ್ದರಿಂದ ಮಗು ನೀರುಪಾಲಾಗಿದೆ ಎಂದು ಕುಟುಂಬದ ಸದಸ್ಯ ಹನೀಫ್ ಎಂಬವರು ಆರೋಪ ಮಾಡಿದ್ದಾರೆ.

ಆರು ಮಂದಿ ಸ್ಪೀಡ್ ಬೋಟ್‌ನಲ್ಲಿ ತೆರಳಿದ್ದ ಸಂದರ್ಭದಲ್ಲಿ ಎಲ್ಲರಿಗೂ ಜಾಕೆಟ್ ಒದಗಿಸಿದ್ದರೆ, ಮಗುವಿನ ಜಾಕೆಟ್ ಲೈಫ್ ಗಾರ್ಡ್‌ನವರಲ್ಲಿರಲಿಲ್ಲ. ಆದ್ದರಿಂದ ಮಗುವಿಗೆ ದೊಡ್ಡವರದ್ದೇ ಜಾಕೆಟ್ ಧರಿಸಲು ನೀಡಿದ್ದು, ಅದರಂತೆ ಮಗು ಜಾಕೆಟ್ ಧರಿಸಿದೆ. ಆದರೆ, ಬೋಟ್ ಮಗುಚಿ ಬಿದ್ದಾಗ ಮಗುವಿನ ಜಾಕೆಟ್ ಶರೀರದಿಂದ ಜಾರಿದೆ. ಇದರಿಂದಾಗಿ ಮಗು ನೀರು ಪಾಲಾಗಿದೆ. ನೀರಿನಲ್ಲಿ ಮಗು ಮುಳುಗುತ್ತಿರುವುದನ್ನು ಕಂಡ ಲೈಫ್ ಗಾರ್ಡ್‌ನವರು ತಮ್ಮ ಬೋಟ್‌ನಲ್ಲಿ ಸಮುದ್ರಕ್ಕೆ ಇಳಿದರೂ ಮಗುವಿನ ಸುತ್ತ ರೈಡ್ ಹೊಡೆಯುವುದನ್ನು ಬಿಟ್ಟು ನೀರಿಗೆ ಇಳಿಯಲು ಹಿಂಜರಿದಿದ್ದಾರೆ ಎಂದು ಹನೀಫ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News