ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ

Update: 2016-10-05 16:35 GMT

ಉಡುಪಿ, ಅ.5: ಕೆಂಜೂರು ಪ್ರವೀಣ್ ಪೂಜಾರಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿ ಆದೇಶ ನೀಡಿದೆ.

ಕುಚ್ಚೂರುಬಾದ್ಲ್‌ನ ರಾಘವೇಂದ್ರ ಶೆಟ್ಟಿ(22)ಗೆ ಜಾಮೀನು ನೀಡುವಂತೆ ಸೆ.17ರಂದು ವಕೀಲ ವೈ.ವಿಕ್ರಂ ಹೆಗ್ಡೆ ಮತ್ತು ಸುಕುಮಾರ್ ಕುಲಾಲ್(22) ಹಾಗೂ ಪ್ರತೀಕ್(19) ಎಂಬವರಿಗೆ ಜಾಮೀನು ನೀಡುವಂತೆ ಸೆ.24ರಂದು ವಕೀಲ ಸಂಜೀವ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಮೂವರ ಜಾಮೀನು ಅರ್ಜಿಗೂ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದ್ದರು. ವಾದ ಪ್ರತಿವಾದ ವನ್ನು ಪರಿಶೀಲಿಸಿದ ಜಿಲ್ಲಾ ಸತ್ರ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಅ.4ರಂದು ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದರು.

ಈ ಪ್ರಕರಣದ 18ನೆ ಆರೋಪಿ ಹಿಂದು ಜಾಗರಣಾ ವೇದಿಕೆ ಮುಖಂಡ ಕುಂಭಾಶಿಯ ಅರವಿಂದ ಕೋಟೇಶ್ವರ(37)ನ ಜಾಮೀನು ಅರ್ಜಿಯನ್ನು ಇದೇ ಕೋರ್ಟ್ ಸೆ.17ರಂದು ತಿರಸ್ಕರಿಸಿತ್ತು. ಆ.17ರಂದು ಕೆಂಜೂರಿನ ಪ್ರವೀಣ್ ಪೂಜಾರಿಯನ್ನು ಗೋಸಾಗಾಟ ಮಾಡಿದ ಕಾರಣಕ್ಕಾಗಿ 22 ಮಂದಿ ಆರೋಪಿಗಳು ಹಲ್ಲೆ ನಡೆಸಿ ಕೊಲೆಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News