ಮೂವರಿಗೆ ರಸಾಯನ ಶಾಸ್ತ್ರ ನೊಬೆಲ್

Update: 2016-10-05 18:55 GMT

ಸ್ಟಾಕ್‌ಹೋಮ್, ಅ. 5: ಫ್ರಾನ್ಸ್‌ನ ಜೀನ್-ಪಿಯರ್ ಸಾವೇಜ್, ಬ್ರಿಟಿಶ್ ಸಂಜಾತ ಜೆ. ಫ್ರೇಸರ್ ಸ್ಟೋಡರ್ಟ್ ಮತ್ತು ನೆದರ್‌ಲ್ಯಾಂಡ್‌ನ ಬರ್ನಾರ್ಡ್ ಫೆರಿಂಗ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ನಿಯಂತ್ರಿತ ಚಲನೆಗಳ ಅಣುಗಳ (ಮೊಲಿಕ್ಯೂಲ್) ವಿನ್ಯಾಸ ಮತ್ತು ಸೃಷ್ಟಿಗಾಗಿ ಅವರಿಗೆ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಯನ್ನು ನೀಡಲಾಗಿದೆ. ಈ ಅಣುಗಳಿಗೆ ಶಕ್ತಿ ನೀಡಿದರೆ ಅದು ನಿರ್ದಿಷ್ಟ ಕಾರ್ಯವೊಂದನ್ನು ಮಾಡಬಹುದಾಗಿದೆ. ಪ್ರಶಸ್ತಿ ವಿಜೇತರು 8 ಮಿಲಿಯ ಕ್ರೋನರ್ (6.19 ಕೋಟಿ ರೂಪಾಯಿ) ನಗದನ್ನು ಹಂಚಿಕೊಳ್ಳಲಿದ್ದಾರೆ ಎಂದು ಸ್ವೀಡಿಶ್ ಅಕಾಡಮಿ ಆಫ್ ಸಯನ್ಸಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಮೊಲಿಕ್ಯುಲರ್ ಮಶೀನ್‌ಗಳನ್ನು ಸೆನ್ಸಾರ್‌ಗಳು ಮತ್ತು ಇಂಧನ ಸಂಗ್ರಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಳಸಬಹುದಾಗಿದೆ ಎಂದು ಅಕಾಡಮಿ ತಿಳಿಸಿದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗುವುದು. ಅರ್ಥಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರಗಳ ನೊಬೆಲ್ ಪ್ರಶಸ್ತಿಗಳನ್ನು ಮುಂದಿನ ವಾರ ಘೋಷಿಸಲಾಗುವುದು. ನೊಬೆಲ್ ಪ್ರಶಸ್ತಿಗಳನ್ನು ಡಿಸೆಂಬರ್ 10ರಂದು ಸ್ಟಾಕ್‌ಹೋಂ ಮತ್ತು ಓಸ್ಲೊಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ವಿತರಿಸಲಾಗುವುದು. ಅಂದು ಪ್ರಶಸ್ತಿಗಳ ಸ್ಥಾಪಕ ಆಲ್‌ಫ್ರೆಡ್ ನೊಬೆಲ್ 1896ರಲ್ಲಿ ನಿಧನರಾದ ದಿನ. ಮಾನವಕುಲಕ್ಕೆ ಅತ್ಯಂತ ಶ್ರೇಷ್ಠ ದೇಣಿಗೆಗಳನ್ನು ನೀಡಿರುವ ಸಾಧನೆಗಳನ್ನು ಮಾಡಿರುವವರಿಗೆ ತನ್ನ ಪ್ರಶಸ್ತಿಗಳು ಸಲ್ಲಬೇಕು ಎಂಬುದಾಗಿ ಆಲ್‌ಫ್ರೆಡ್ ನೊಬೆಲ್ ಬಯಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News