ವಿಶ್ವಸಂಸ್ಥೆಗೆ ನೂತನ ಪ್ರಧಾನ ಕಾರ್ಯದರ್ಶಿ

Update: 2016-10-06 03:40 GMT

ವಿಶ್ವಸಂಸ್ಥೆ, ಅ.6: ಪೋರ್ಚ್‌ಗಲ್‌ನ ಮಾಜಿ ಪ್ರಧಾನಿ ಅಂಟೊನಿಯೊ ಗುಟ್ರೆಸ್ ಅವರು ವಿಶ್ವಸಂಸ್ಥೆಯ ಮುಂದಿನ ಪ್ರಧಾನ ಕಾರ್ಯದರ್ಶಿಯಾಗುವುದು ಬಹುತೇಕ ಖಚಿತ. ಬುಧವಾರ ನಡೆದ ರಹಸ್ಯ ಮತದಾನದ ವೇಳೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ವಿಟೊ ಅಧಿಕಾರ ಹೊಂದಿರುವ ಯಾವ ಐದು ದೇಶಗಳು ಕೂಡಾ ಅವರ ವಿರುದ್ಧವಾಗಿ ಮತ ಚಲಾಯಿಸದ ಕಾರಣ ಅವರ ಆಯ್ಕೆ ಖಚಿತವಾಗಿದೆ ಎಂದು ರಾಜತಾಂತ್ರಿಕರು ಪ್ರಕಟಿಸಿದ್ದಾರೆ.

ಹದಿನೈದು ಮಂದಿ ಭದ್ರತಾ ಮಂಡಳಿ ಸದಸ್ಯ ದೇಶಗಳು ರಹಸ್ಯ ಮತದಾನದಲ್ಲಿ ಮತ ಚಲಾಯಿಸುತ್ತಾರೆ. ಎಲ್ಲ 10 ಮಂದಿ ಅಭ್ಯರ್ಥಿಗಳ ಬಗ್ಗೆಯೂ ಬೆಂಬಲ, ಬೆಂಬಲವಿಲ್ಲ ಅಥವಾ ಯಾವುದೇ ಅಭಿಪ್ರಾಯವಿಲ್ಲ ಎಂಬ ಮೂರು ರೀತಿಯಲ್ಲಿ ಮತ ಚಲಾಯಿಸಬಹುದು. ಗುಟ್ರೆಸ್ ಅವರಿಗೆ ಬೆಂಬಲ ಸೂಚಿಸಿ 13 ಮತಗಳು ಬಿದ್ದಿದ್ದರೆ, ಎರಡು ದೇಶಗಳು ಯಾವುದೇ ಅಭಿಪ್ರಾಯ ಇಲ್ಲ ಎಂದು ಮತ ಚಲಾಯಿಸಿವೆ.

"ಆರನೇ ಸುತ್ತಿನ ಮತದಾನದ ವೇಳೆ ಸ್ಪಷ್ಟ ಚಿತ್ರಣ ದೊರಕಿದ್ದು, ಆಂಟೋನಿಯಾ ಗುಟ್ರೆಸ್ ಹೊಸ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ" ಎಂದು ವಿಶ್ವಸಂಸ್ಥೆಯಲ್ಲಿ ರಷ್ಯಾ ರಾಯಭಾರಿಯಾಗಿರುವ ವಿಟಾಯ್ ಚುರ್ಕಿಗ್ ಪ್ರಕಟಿಸಿದ್ದಾರೆ. ಇತರ 14 ಮಂದಿ ಮಂಡಳಿ ಸದಸ್ಯ ಪ್ರತಿನಿಧಿಗಳು ಅವರ ಜೊತೆಗಿದ್ದರು. ಔಪಚಾರಿಕವಾಗಿ ಇದೀಗ ಅವರ ಹೆಸರನ್ನು ವಿಶ್ವಸಂಸ್ಥೆ ಸಾಮಾನ್ಯಸಭೆಗೆ ಭದ್ರತಾ ಮಂಡಳಿ ಶಿಫಾರಸ್ಸು ಮಾಡಬೇಕಿದೆ. ಈ ಸಂಬಂಧ ಭದ್ರತಾ ಮಂಡಳಿ ಇಂದು ನಿರ್ಣಯ ಆಂಗೀಕರಿಸಲಿದ್ದು, ಈ ನಿರ್ಣಯಕ್ಕೆ ಕನಿಷ್ಠ 9 ಮತಗಳು ಪರವಾಗಿ ಚಲಾವಣೆಯಾಗಬೇಕು. ಯಾವ ವಿಟೊ ಅಧಿಕಾರದ ದೇಶಗಳು ಕೂಡಾ ವಿರುದ್ಧವಾಗಿ ಮತ ಚಲಾಯಿಸುವಂತಿಲ್ಲ. ಆಗ ಮಾತ್ರ ನಿರ್ಣಯ ಅಂಗೀಕಾರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News