ವಿಂಡೀಸ್ ವಿರುದ್ಧದ ಏಕದಿನ ಸರಣಿ: ಕ್ಲೀನ್‌ಸ್ವೀಪ್ ಸಾಧಿಸಿದ ಪಾಕ್
ಅಬುಧಾಬಿ, ಅ.6: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಬಾಬರ್ ಆಝಂ ಬಾರಿಸಿದ ಸತತ ಮೂರನೆ ಶತಕದ ಸಹಾಯದಿಂದ ಪಾಕಿಸ್ತಾನ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ತೃತೀಯ ಏಕದಿನ ಪಂದ್ಯವನ್ನು 136 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿತು.
ಬುಧವಾರ ರಾತ್ರಿ ಇಲ್ಲಿ ನಡೆದ 3ನೆ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ನಾಯಕ ಅಝರ್ ಅಲಿ(101, 109 ಎಸೆತ, 8 ಬೌಂಡರಿ, 1 ಸಿಕ್ಸರ್ ) ಹಾಗೂ ಆಝಂ(117, 106 ಎಸೆತ, 8 ಬೌಂಡರಿ, 1 ಸಿಕ್ಸರ್) ಬಾರಿಸಿದ ಆಕರ್ಷಕ ಶತಕದ ಬೆಂಬಲದಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 308 ರನ್ ಗಳಿಸಿತು.
ಗೆಲ್ಲಲು ಕಠಿಣ ಗುರಿ ಪಡೆದ ವಿಂಡೀಸ್ 44 ಓವರ್‌ಗಳಲ್ಲಿ ಕೇವಲ 172 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಮುಹಮ್ಮದ್ ನವಾಝ್(3-40) ಹಾಗೂ ವಹಾಬ್ ರಿಯಾಝ್(2-28) ವಿಂಡೀಸ್‌ನ್ನು ಬೇಗನೆ ಆಲೌಟ್ ಮಾಡಿದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್‌ಗೆ ಆಝಂ ಮತ್ತೊಮ್ಮೆ ಆಸರೆಯಾದರು. ಆಝಂ ಏಕದಿನ ಸರಣಿಯೊಂದರಲ್ಲಿ ಸತತ 3 ಶತಕ ಬಾರಿಸಿದ ಪಾಕ್‌ನ ಮೂರನೆ ಹಾಗೂ ವಿಶ್ವದ 8ನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ನಾಯಕ ಅಲಿಯೊಂದಿಗೆ 2ನೆ ವಿಕೆಟ್‌ಗೆ 147 ರನ್ ಜೊತೆಯಾಟ ನಡೆಸಿದ ಆಝಂ ಪಾಕ್ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು. ಮತ್ತೊಂದೆಡೆ, ಅಝರ್ ಅಲಿ ನಾಯಕನಾಗಿ ಮೂರು ಶತಕ ಬಾರಿಸಿದ ಪಾಕ್‌ನ ಏಕೈಕ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 50 ಓವರ್‌ಗಳಲ್ಲಿ 308/6
(ಆಝಂ 117, ಅಝರ್ ಅಲಿ 101, ಜೋಸೆಫ್ 2-62)
ವೆಸ್ಟ್‌ಇಂಡೀಸ್: 44 ಓವರ್‌ಗಳಲ್ಲಿ 172 ರನ್‌ಗೆ ಆಲೌಟ್
(ರಾಮ್ದಿನ್ 37, ಬ್ರಾತ್‌ವೈಟ್ 32, ನವಾಝ್ 3-40, ರಿಯಾಝ್ 2-28)
ಪಂದ್ಯಶ್ರೇಷ್ಠ: ಬಾಬರ್ ಆಝಂ
ಸರಣಿಶ್ರೇಷ್ಠ: ಬಾಬರ್ ಆಝಂ.