ಬೋಟ್ ಮಗುಚಿ ನೀರುಪಾಲಾಗಿದ್ದ ಮಗುವಿನ ಮೃತದೇಹ ಪತ್ತೆ
ಮಂಗಳೂರು, ಅ. 6: ತಾಂತ್ರಿಕ ದೋಷಕ್ಕೆ ಒಳಗಾದ ಸ್ಪೀಡ್ ಬೋಟ್‌ವೊಂದು ಮಗುಚಿ ಬಿದ್ದ ಪರಿಣಾಮ ನೀರುಪಾಲಾಗಿದ್ದ ಮಗುವಿನ ಮೃತದೇಹ ಇಂದು ಬೆಳಗ್ಗೆ ಪಣಂಬೂರು ಕಡಲಕಿನಾರೆಯಲ್ಲಿ ಪತ್ತೆಯಾಗಿದೆ.
ನಾಟೆಕಲ್ ನಿವಾಸಿ ಸನಾಯಿಲ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಶಹದನ್ (2.5) ಮೃತಪಟ್ಟ ಮಗು.
ಶಹದನ್ ಸೇರಿದಂತೆ ಕುಟುಂಬದ ಆರು ಮಂದಿ ಸದಸ್ಯರು ಬುಧವಾರ ಪಣಂಬೂರು ಬೀಚ್‌ಗೆ ಬಂದಿದ್ದು, ಬೀಚ್‌ನಲ್ಲಿ ಸುತ್ತಾಟ ನಡೆಸಿ ಸ್ಪೀಡ್ ಬೋಟ್‌ನಲ್ಲೂ ಸುತ್ತಾಟಕ್ಕೆ ತೆರಳಿದ್ದರು. ಸ್ಪೀಡ್ ಬೋಟ್ ತುಸು ದೂರ ತಲುಪುತ್ತಿದ್ದಂತೆ ಬೋಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರಿನ ತೆರೆಗೆ ಸಿಲುಕಿ ಬೋಟ್ ಮಗುಚಿ ಬಿದ್ದಿತ್ತು. ಆ ಕೂಡಲೇ ಮಗು ನೀರಿನ ಸೆಳೆತಕ್ಕೆ ಸಿಲುಕಿ ಹೋಗಿದ್ದು ಉಳಿದವರು ಲೈಫ್ ಜಾಕೆಟ್ ಧರಿಸಿದ್ದ ಕಾರಣದಿಂದ ಈಜುವ ಪ್ರಯತ್ನ ನಡೆಸಿದ್ದರು. ಕೂಡಲೇ ಸ್ಥಳೀಯರು ಐದು ಮಂದಿಯನ್ನು ರಕ್ಷಿಸಿದ್ದರು.
ಬೀಚ್ ರಕ್ಷಣಾ ದಳ, ಮುಳುಗು ತಜ್ಞರು ಸಮುದ್ರದಲ್ಲಿ ಮಗುವಿನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದರು. ಶೋಧ ಕಾರ್ಯಾಚರಣೆಯನ್ನು ರಾತ್ರಿ ವೇಳೆಯೂ ಮುಂದುವರೆಸುವಂತೆ ಸಚಿವ ಖಾದರ್ ಸೂಚನೆ ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆದಿದ್ದು, ಇಂದು ಮುಂಜಾನೆ ವೇಳೆ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.