×
Ad

ಸುರತ್ಕಲ್-ಕಾನ-ಎಂಆರ್ ಪಿಎಲ್ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ

Update: 2016-10-06 11:48 IST

ಮಂಗಳೂರು, ಅ.6: ಬೃಹತ್ ವಾಹನಗಳ ಓಡಾಟದಿಂದ ಸಂಪೂರ್ಣ ಹದಗೆಟ್ಟಿರುವ ಸುರತ್ಕಲ್-ಕಾನ-ಎಂಆರ್ ಪಿಎಲ್ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಕಾನ-ಸುರತ್ಕಲ್ ನಾಗರಿಕರ ಹೋರಾಟ ಸಮಿತಿಯ ವತಿಯಿಂದ ಬೃಹತ್ ಪಾದಯಾತ್ರೆ ನಡೆಯಿತು.

ಸುರತ್ಕಲ್ ನ ರೈಲ್ವೆ ಬ್ರಿಡ್ಜ್ ನಿಂದ ಎಂಆರ್ ಪಿಎಲ್ ನ ಕಾರ್ಗೊಗೇಟ್ ವರಗೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಾಗರಿಕರು ಪಾದಯಾತ್ರೆ ಕೈಗೊಂಡರು.

ಈ ಸಂದರ್ಭ ಧರಣಿಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್ಪಿಎಲ್, ಬಎಎಸ್ಎಫ್ ಮುಂತಾದ ಬೃಹತ್ ಉದ್ದಿಮೆಗಳು ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಸಂಸದರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಇಂತಹ ಕಂಪೆನಿಗಳ ಮುಂದೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸ್ಥಳೀಯ ಜನಪ್ರತಿನಿಧಿಗಳು ಅಸಹಾಯಕರಾಗಿದ್ದಾರೆ. ಸ್ಥಳೀಯ ಶಾಸಕರು ಮಾತನಾಡುತ್ತಿಲ್ಲ. ಮೇಯರ್ ಅವರು 20 ದಿನಗಳ ಒಳಗೆ ಸಮಸ್ಯೆ ಪರಿಹರಿಸುತ್ತೇನೆ ಎಂದು ಹೇಳಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು. ಸುಳ್ಳು ಹೇಳಿಕೆಗಳ ಮೂಲಕ ಜನರ ಕಣ್ಣಿಗೆ ಮಣ್ಣೆರಚಬಾರದು. 20 ದಿನಗಳೊಳಗೆ ರಸ್ತೆ ದುರಸ್ತಿಯಾಗದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಲ್ಲಿರುವ ಉದ್ದಿಮೆಗಳು ನಮ್ಮ ನೆಲ-ಜಲವನ್ನು ಬಳಸಿಕೊಂಡು ನಮಗೆ ಒಳ್ಳೆಯದನ್ನು ಮಾಡುವ ಬದಲು ನಮ್ಮನ್ನು ರೋಗಗ್ರಸ್ತರನ್ನಾಗಿ ಮಾಡುತ್ತಿವೆ. ರಸ್ತೆಯ ಗುಂಡಿಗಳಿಗೆ ಕಂಪೆನಿಯ ತ್ಯಾಜ್ಯ ವಸ್ತುಗಳನ್ನು ಸುರಿದು ಹೊಂಡಗಳನ್ನು ಮುಚ್ಚಿ ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ. ಅರ್ಹತೆ ಇಲ್ಲದ ಜನಪ್ರತಿನಿಧಿಗಳೇ ಇಲ್ಲಿದ್ದಾರೆ ಎಂದು ಮುನೀರ್ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ನವೀನ್ ಪೂಜಾರಿ, ವೆಲನ್ ಡಿಸೋಜ, ಡಿವೈಎಫ್ಐ ಘಟಕಾಧ್ಯಕ್ಷ ಅಜ್ಮಲ್,  ಮೆಹಬೂಬ್ ಖಾನ್, ರತ್ನಾಕತ ಕಟ್ಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News