‘ಭಾರತದ ಸೀಮಿತ ದಾಳಿಯಲ್ಲಿ ಐವರು ಪಾಕ್ ಸೈನಿಕರು ಮೃತಪಟ್ಟಿದ್ದಾರೆ’
ಹೊಸದಿಲ್ಲಿ, ಅ.6: ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಉದ್ದಕ್ಕೂ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ(ಸರ್ಜಿಕಲ್ ಸ್ಟ್ರೈಕ್)ಯಲ್ಲಿ ಪಾಕ್‌ನ ಐವರು ಸೈನಿಕರು ಪ್ರಾಣ ಬಿಟ್ಟಿದ್ದಾರೆ ಎಂದು ಸಿಎನ್‌ಎನ್-ನ್ಯೂಸ್ 18 ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಪಾಕ್‌ನ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆ.29 ರಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ನಿಜ. ಸುಮಾರು 3-4 ಗಂಟೆಗಳ ಕಾಲ ದಾಳಿ ನಡೆದಿತ್ತು. ದಾಳಿಯು ರಾತ್ರಿ 2 ರಿಂದ 5 ಗಂಟೆಯ ತನಕವೂ ಮುಂದುವರಿದಿತ್ತು. ಪಾಕಿಸ್ತಾನದ ಸೈನಿಕರಿಗೆ ದಾಳಿಯ ಬಗ್ಗೆ ಅರಿವೇ ಇರಲಿಲ್ಲ. ಪಾಕ್‌ನ ಐವರು ಸೈನಿಕರು ಸಾವನ್ನಪ್ಪಿದ್ದು, ಅವರ ಹೆಸರನ್ನು ಬಹಿರಂಗಪಡಿಸಲಾಗಿತ್ತು. ಆದರೆ, ಟಿವಿ ಚಾನಲ್‌ಗಳಲ್ಲಿ ಅದನ್ನು ಪ್ರಸಾರ ಮಾಡಲಾಗಿಲ್ಲ. ಲೆಕ್ಕಕ್ಕೆ ಸಿಗದ ಭಯೋತ್ಪಾದಕರ ಕಳೇಬರವನ್ನು ಪಾಕಿಸ್ತಾನಿ ಮಿಲಿಟರಿ ತಕ್ಷಣವೇ ತೆರವುಗೊಳಿಸಿತ್ತು. ಆ್ಯಂಬುಲೆನ್ಸ್‌ನಲ್ಲಿ ಉಗ್ರರ ಶವವನ್ನು ಬೇರೆಡೆಗೆ ಸಾಗಿಸಲಾಗಿತ್ತು ಎಂದು ಪಿಒಕೆಯ ಮೀರ್ಪುರ ವಲಯದ ಎಸ್‌ಪಿ(ವಿಶೇಷ ದಳ) ಗುಲಾಮ್ ಅಕ್ಬರ್ ಹೇಳಿದ್ದಾರೆ.