ಎತ್ತಿನಹೊಳೆ ಯೋಜನೆ ವಿರುದ್ಧ ರಸ್ತೆ ತಡೆ!

Update: 2016-10-06 09:41 GMT

ಮಂಗಳೂರು, ಅ.6: ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸರ್ವಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ಬೆಸೆಂಟ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಕೇಮಾರು ಸಾಂದೀಪನಿ ಮಠದ ಈಶ ವಿಠಲ ದಾಸ ಸ್ವಾಮೀಜಿ ಮಾತನಾಡಿ, ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟವು ಹಿಂಸೆಗೆ ತಿರುಗುವ ಮೊದಲು ರಾಜ್ಯ ಸರಕಾರ ಎಚ್ಚೆತ್ತುಕೊಂಡು ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಎತ್ತಿನ ಹೊಳೆಯ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ಕಡೆಗಣಿಸಿದೆ. ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ 15 ದಿನಗಳಲ್ಲಿ ಸಿಎಂ ಜತೆಗೆ ಮಾತನಾಡುತ್ತೇನೆ ಎಂದು ಹೇಳಿ ಮೂರು ತಿಂಗಳು ಕಳೆದಿವೆ. ಮುಖ್ಯಮಂತ್ರಿಯವರೂ ಈ ಬಗ್ಗೆ ಮಾತನಾಡುತ್ತಿಲ್ಲ. ಇದೇ ರೀತಿ ಮುಂದುವದರಿದರೆ ಪ್ರತ್ಯೇಕ ತುಳುನಾಡಿನ ಬೇಡಿಕೆ ಪ್ರಬಲವಾಗಲಿದೆ ಎಂದು ಅವರು ಹೇಳಿದರು.

ಈ ಬಾರಿ ಜಿಲ್ಲೆಯಲ್ಲಿ ಕಳೆದ ಬಾರಿಗಿಂತಲೂ ಮುಂಚಿತವಾಗಿಯೇ ನೀರಿನ ಸಮಸ್ಯೆ ಉಲ್ಬಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆಗ ಜಿಲ್ಲೆಯ ಜನಪ್ರತಿನಿಧಿಗಳಿಗೆ ನೇತ್ರಾವತಿ ನದಿಯ ಮಹತ್ವದ ಅರಿವಾಗಬಹುದು ಎಂದು ಅವರು ಹೇಳಿದರು.

ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, ಎತ್ತಿನಹೊಳೆ ಯೋಜನೆಯ ಹಣವನ್ನು ಕೆಲ ಭ್ರಷ್ಟ ಜನಪ್ರತಿನಿಧಿಗಳು, ಐಎಎಸ್ ಅಧಿಕಾರಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆಪಾದಿಸಿದರು.

ಯೋಜನೆ ಫಲಕಾರಿಯಾಗುವುದಿಲ್ಲ ಎಂಬ ಅರಿವಿದ್ದರೂ ಜನರಿಗೆ ಮೋಸ ಮಾಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ನದಿಗಳಲ್ಲಿ ನೀರು ಖಾಲಿಯಾಗಿ ಕ್ರಿಕೆಟ್ ಆಟವಾಡುವ ಮೈದಾನ ಸೃಷ್ಟಿಯಾಗಿದೆ. ಆದರೂ ಎತ್ತಿನಹೊಳೆ ಯೋಜನೆಯಲ್ಲಿ ಯಾಕೆ ಏನೂ ಕಾಣದೆ, ಅರಿಯಂತೆ ವರ್ತಿಸುತ್ತಿದ್ದಾರೆಂದು ತಿಳಿಯುತ್ತಿಲ್ಲ ಎಂದು ಬೇಸರಿಸಿದರು.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ದಿನಕರ್ ಶೆಟ್ಟಿ ಮಾತನಾಡಿ, ಕಾವೇರಿ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ರಾಜ್ಯ ಸರಕಾರ ಎತ್ತಿನಹೊಳೆ ಯೋಜನೆಯಲ್ಲಿ ಸ್ಪಂದನೆ ನೀಡದೆ ಸರಕಾರ ಮಲತಾಯಿಧೋರಣೆಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ಪ್ರವೀಣ್ ವಾಲ್ಕೆ, ಆನಂದ ಶೆಟ್ಟಿ ಅಡ್ಯಾರ್, ಪ್ರಜ್ಜಲ್ ಪೂಜಾರಿ, ಅಂಕಿತಾ ಸುವರ್ಣ, ಸುಜಿತ್, ಸಂಜಿತ್, ಪ್ರದೀಪ್, ಆಶಿಶ್, ಅನಿಶ್ ರಾವ್, ಅಶ್ವಿತ್ ಕೊಠಾರಿ, ತುಷಾರ್ ಕದ್ರಿ, ಜಯತ್, ಅರ್ಚನಾ ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News