×
Ad

ಲೋಧಾ ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ಬಿಸಿಸಿಐಗೆ ಸುಪ್ರೀಂಕೋರ್ಟ್ ಅಂತಿಮ ಗಡುವು

Update: 2016-10-06 16:13 IST

ಹೊಸದಿಲ್ಲಿ, ಅ.6: ಜಸ್ಟಿಸ್ ಆರ್‌ಎಂ ಲೋಧಾ ಸಮಿತಿ ಶಿಫಾರಸು ಮಾಡಿರುವ ಎಲ್ಲ ಸುಧಾರಣೆಗಳನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೆ ತರಲೇಬೇಕು. ಬಿಸಿಸಿಐ ಈ ಬಗ್ಗೆ ಶುಕ್ರವಾರ ಮುಚ್ಚಳಿಕೆಯನ್ನು ಬರೆದುಕೊಡಬೇಕು ಎಂದು ಸುಪ್ರೀಂಕೋರ್ಟ್ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ತಾಕೀತು ಮಾಡಿದೆ.

 ಲೋಧಾ ಸಮಿತಿಯ ವಸ್ತುಸ್ಥಿತಿ ವರದಿಗೆ ಬಿಸಿಸಿಐ ನೀಡಿರುವ ಪ್ರತಿಕ್ರಿಯೆಯ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ವೇಳೆ ನ್ಯಾಯಾಲಯದ ಆದೇಶವನ್ನು ಬಿಸಿಸಿಐ ಪಾಲಿಸದೇ ಇದ್ದರೆ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳನ್ನು ಉಚ್ಚಾಟಿಸಿ ಹೊಸ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಲೋಧಾ ಸಮಿತಿಯ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಕ್ರಿಕೆಟ್ ಮಂಡಳಿಯೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಿ ಅ.7 ಶುಕ್ರವಾರ ಉತ್ತರ ನೀಡಬೇಕೆಂದು ಬಿಸಿಸಿಐ ಪರ ವಕೀಲರಾದ ಕಪಿಲ್ ಸಿಬಲ್‌ಗೆ ಟಿಎಸ್ ಠಾಕೂರ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಆದೇಶಿಸಿದೆ. ಸಿಬಲ್ ಮತ್ತಷ್ಟು ಕಾಲಾವಕಾಶ ಕೇಳಿದರೂ, ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತು.

  ಲೋಧಾ ಸಮಿತಿ ಶಿಫಾರಸು ಮಾಡಿರುವ ಸುಧಾರಣೆಗಳನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಬೇಕು. ಬಿಸಿಸಿಐಯಿಂದ ಹಣವನ್ನು ಸ್ವೀಕರಿಸುವುದು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News