ವಸತಿ ಯೋಜನೆ ನಿಯಮ ಸರಳೀಕರಣಕ್ಕೆ ಪತ್ರ: ಬಂಟ್ವಾಳ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ

Update: 2016-10-06 11:55 GMT

ಬಂಟ್ವಾಳ, ಅ.6: ಬಸವ ಸೇರಿದಂತೆ ಇನ್ನಿತರ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೆಲವೊಂದು ಕಾನೂನುಗಳ ತೊಡಕಿನಿಂದ ಮನೆ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಫಲಾನುಭವಿಯ ಅಥವಾ ಅವಳ ಗಂಡನ ಹೆಸರಿನಲ್ಲಿಯೇ ನಿವೇಶನ ಇರಬೇಕೆಂಬ ನಿಯಮವನ್ನು ಸರಳೀಕರಣಗೊಳಿಸಿ ಫಲಾನುಭವಿಗಳ ರಕ್ತ ಸಂಬಂಧಿಗಳ ಹೆಸರಿನಲ್ಲಿ ನಿವೇಶನವಿದ್ದರೂ ಅವರ ಒಪ್ಪಿಗೆ ಆಧಾರದಲ್ಲಿ ಮನೆ ಮಂಜೂರಿಗೆ ಸರಕಾರಕ್ಕೆ ಪತ್ರ ಬರೆಯುವಂತೆ ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯ ಪ್ರಭಾಕರ್ ಪ್ರಭು ಆಗ್ರಹಿಸಿದರು.

ಸಭೆಯ ಇಲಾಖಾವಾರು ಚರ್ಚೆಯ ವೇಳೆ ವಿಷಯ ಪ್ರಸ್ತಾಪಿಸಿದ ಅವರು, 9/11ನಿಂದಾಗಿ ಗ್ರಾಮೀಣ ಭಾಗದ ಜನರ ಖಾತೆ ಬದಲಾವಣೆಗೂ ತೊಂದರೆಯಾಗುತ್ತಿದ್ದು ಈ ನಿಟ್ಟಿನಲ್ಲೂ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತ್‌ಗಳಲ್ಲಿನ ಈಸ್ವತ್ತುನೊಂದಿಗೆ ಪಂಚತಂತ್ರ ಸಾಫ್ಟ್‌ವೇರ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಈ ಕುರಿತಾಗಿ ಸಭೆ ನಿರ್ಣಯ ಕೈಗೊಂಡು ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.

ಶಿಕ್ಷಕನ ನೇಮಕಕ್ಕೆ ಒತ್ತಾಯ

ಒಂದು ಶಾಲೆಯಲ್ಲಿ ಒಬ್ಬನೆ ಶಿಕ್ಷಕನಿದ್ದರೆ ಇಲಾಖೆಯ ಸಭೆ, ಇನ್ನಿತರ ಚಟುವಟಿಕೆ ಹಾಗೂ ಅವರು ರಜೆ ಹಾಕಿ ತೆರಳಿದ ಸಂದರ್ಭದಲ್ಲಿ ಶಾಲಾ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆಯಲ್ಲದೆ ಶಾಲೆಯ ಪರಿಸ್ಥಿತಿಯನ್ನೂ ಕೂಡಾ ಕೇಳುವವರಿಲ್ಲದಂತಾಗುತ್ತದೆ. ಹಾಗಾಗಿ ತಾಲೂಕಿನಲ್ಲಿ ಒಬ್ಬರೆ ಶಿಕ್ಷಕರಿರುವ ಶಾಲೆಗಳಿದ್ದರೆ ಶಿಕ್ಷಣಾಧಿಕಾರಿ ಗುರುತಿಸಿ ಅಲ್ಲಿಗೆ ಕಡ್ಡಾಯವಾಗಿ ಇನ್ನೋರ್ವ ಶಿಕ್ಷಕನನ್ನು ಕೂಡಲೇ ನಿಯುಕ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಸಲಹೆ ನೀಡಿದರು.

94ಸಿ ವಿವಾದ

2012ಕ್ಕಿಂತ ಮೊದಲು ಸರಕಾರಿ ನಿವೇಶನದಲ್ಲಿ ಮನೆ ಕಟ್ಟಿ ಕುಳಿತವರಿಗೆ ಯಾವುದೇ ದಾಖಲೆಪತ್ರಗಳನ್ನು ಕೇಳದೆ ಹಕ್ಕು ಪತ್ರ ನೀಡಲಾಗುವುದು ಎಂದು ಇತ್ತೀಚೆಗೆ ವಿಟ್ಲದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಂಗಳೂರು ಸಹಾಯಕ ಕಮೀಷನರ್ ಅವರು ಸ್ಪಷ್ಟ ಪಡಿಸಿದ್ದರಾದರೂ ಕೆಲವು ಗ್ರಾಮ ಕರಣಿಕರು ಫಲಾನುಭವಿಗಳಿಂದ ಆಧಾರ್, ಮನೆ ನಂಬ್ರ ಸಹಿತ ಕೆಲ ದಾಖಲೆಗಳನ್ನು ಕೇಳಿ ಸತಾಯಿಸುತ್ತಿದ್ದಾರೆ ಎಂದು ಸದಸ್ಯ ಎಂ.ಎಸ್.ಮುಹಮ್ಮದ್ ಅವರು ಸಭೆಯ ಗಮನ ಸೆಳೆದರು. ಈ ಬಗ್ಗೆ ತಹಶೀಲ್ದಾರ್ ಪುರಂದರ ಹೆಗಡೆ ಪ್ರತಿಕ್ರಿಯಿಸಿ ಈ ಬಗ್ಗೆ ಗ್ರಾಮ ಕರಣಿಕರಿಗೆ ಮನವರಿಕೆ ಮಾಡಲಾಗುವುದು ಎಂದರು.

ಶೌರ್ಯ ಪ್ರಶಸ್ತಿಗೆ ಶಿಫಾರಸು

ಇದೇ ವೇಳೆ ಹೆಬ್ಬಾವಿನೊಂದಿಗೆ ಸೆಣಸಾಡಿ ಪ್ರಾಣಾಪಾಯದಿಂದ ಪಾರಾದ ಸಜಿಪದ ಶಾಲಾ ಬಾಲಕ ವೈಶಾಖ್‌ಗೆ ಮಕ್ಕಳ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಉಪಾಧ್ಯಕ್ಷ ಅಬ್ಬಾಸ್ ಅಲಿ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಹೆಸರು ಶಿಫಾರಸಿಗೆ ಸಭೆ ನಿರ್ಣಯಿಸಿತು. ಹಾಗೆಯೇ ಚೆಂಬೇರಿ ಮೀನು ತಿಂದು ಬಂಟ್ವಾಳ ತಾಲೂಕಿನಲ್ಲಿ ಅಸ್ವಸ್ಥರಾದ 5 ಪ್ರಕರಣಗಳು ಮಾತ್ರ ಇಲಾಖೆಯಲ್ಲಿ ದಾಖಲಾಗಿದೆ ಎಂದು ಉಪಾಧ್ಯಕ್ಷರ ಪ್ರಶ್ನೆಯೊಂದಕ್ಕೆ ಆರೋಗ್ಯಾಧಿಕಾರಿ ದೀಪಾಪ್ರಭು ಸಬೆಗೆ ಮಾಹಿತಿ ನೀಡಿದರು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭಾಧ್ಯಕ್ಷತೆ ವಹಿಸಿ ಕಲಾಪ ನಡೆಸಿದರು. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಹಶೀಲ್ದಾರ್ ಪುರಂದರ ಹೆಗಡೆ ವೇದಿಕೆಯಲ್ಲಿದ್ದರು. ಸದಸ್ಯರಾದ ಉಸ್ಮಾನ್ ಕರೋಪಾಡಿ, ಆದಂ ಕುಂಞಿ, ಮಂಜುಳಾ, ಗಣೇಶ್ ಸುವರ್ಣ, ಮಲ್ಲಿಕಾ ಶೆಟ್ಟಿ, ಯಶವಂತ ಪೂಜಾರಿ, ಪದ್ಮಶ್ರೀ, ಮಾಬಲ ಆಳ್ವ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.

ಅಪ್ನದೇಶ್ ಕಾರ್ಯಕ್ರಮದಡಿಯಲ್ಲಿ ಉತ್ತಮ ನಿರ್ವಹಣೆ, ತೋಟಗಾರಿಕೆ, ಸ್ವಚ್ಛತೆಯಲ್ಲಿ, ಶೈಕ್ಷಣಿಕ ಭೌತಿಕ ಪ್ರಗತಿಯಲ್ಲಿ ಸಾಧನೆಗೈದ ಬಂಟ್ವಾಳ ತಾಲೂಕಿನ ಸುರಿಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಶದಲ್ಲೇ 3ನೆ ಸ್ಥಾನ ಪಡೆದಿದೆ. ಹಾಗೆಯೇ ಕರ್ನಾಟಕ ರಾಜ್ಯದಿಂದ ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ಏಕೈಕ ಶಾಲೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸರ್ವ ಸದಸ್ಯರು ಮೇಜುತಟ್ಟಿ ಅಭಿನಂದಿಸಿದರು.

9ರಂದು ಸಿಎಂ ಜಿಲ್ಲೆಗೆ

ಉಪ್ಪಿನಂಗಡಿಯ ಕೊಯ್ಲದಲ್ಲಿ ನಿರ್ಮಾಣಗೊಳ್ಳಲಿರುವ ಪಶುವೈದ್ಯಕೀಯ ಕಾಲೇಜಿನ ಶಿಲಾನ್ಯಾಸಕ್ಕೆ ಅ. 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸಭೆಗೆ ಮಾಹಿತಿ ನೀಡಿ ಎಲ್ಲಾ ಸದಸ್ಯರು ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು. ಅಂದು ಮಧ್ಯಾಹ್ನ 1 ಗಂಟೆಗೆ ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ನಿರ್ಮಾಣಗೊಂಡಿರುವ ಸುಸಜ್ಜಿತ ’ಜೋಡುಮಾರ್ಗ ಉದ್ಯಾನವನ’ವನ್ನು ಕೂಡಾ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ಉಪಾಧ್ಯಕ್ಷ ಅಬ್ಬಾಸ್ ಅಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News