×
Ad

ವೈದ್ಯಕೀಯ ತ್ಯಾಜ್ಯ ವಿಲೇವಾರಿಯನ್ನು ಏಜೆನ್ಸಿ ಮೂಲಕವೇ ಮಾಡಿ

Update: 2016-10-06 18:33 IST

ಉಡುಪಿ, ಅ.6: ಉಡುಪಿ ಜಿಲ್ಲೆಯಲ್ಲಿ ಸುಮಾರು 750-800 ನರ್ಸಿಂಗ್ ಹೋಂ, ಆಸ್ಪತ್ರೆ, ಕ್ಲಿನಿಕ್‌ಗಳಿದ್ದು ಇಲ್ಲಿ ಪ್ರತಿದಿನ ಉತ್ಪಾದನೆಯಾಗುವ ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಈಗಾಗಲೇ ಏಜೆನ್ಸಿಗಳನ್ನು ನೇಮಕ ಮಾಡಲಾಗಿದೆ. ಆದರೂ ಕೆಲವು ಕ್ಲಿನಿಕ್ ಹಾಗೂ ಆಸ್ಪತ್ರೆಗಳು ತ್ಯಾಜ್ಯಗಳನ್ನು ಏಜೆನ್ಸಿಗಳಿಗೆ ನೀಡದೆ ಹೊರಗೆ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ಮಾಡುವುದು ಅಪರಾಧವಾಗಿದೆ. ಆದುದ ರಿಂದ ಆಸ್ಪತ್ರೆಗಳು ತ್ಯಾಜ್ಯಗಳನ್ನು ಹೊರಗಡೆ ಎಸೆಯದೆ ಪ್ರತಿದಿನ ಕಡ್ಡಾಯ ವಾಗಿ ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಗುರುವಾರ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಆಯೋಜಿಸಲಾದ ಜೀವ ವೈದ್ಯಕೀಯ ಹಾಗೂ ಘನತ್ಯಾಜ್ಯ ನಿರ್ವಹಣೆ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಜನಸಂಖ್ಯೆ ಎರಿಕೆಯಾಗುತ್ತಿದ್ದಂತೆ ಪ್ರಸ್ತುತ ಜೀವ ವೈದ್ಯಕೀಯ, ಘನತ್ಯಾಜ್ಯ, ಇ-ತ್ಯಾಜ್ಯಗಳ ನಿರ್ವಹಣೆ ಎಂಬುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಂಗಡಣೆ ಮಾಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದರು.

ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಜಾಗದ ಕೊರತೆ ಕೂಡ ನಮ್ಮ ಮುಂದೆ ಇರುವ ದೊಡ್ಡ ಸಮಸ್ಯೆಯಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ಹಾಗೂ ಕಾಪು ಪುರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಖಾಸಗಿಯವರಿಂದ ಜಾಗ ಖರೀದಿಸಿದರೂ ಘಟಕ ಸ್ಥಾಪನೆ ಮಾಡಲು ಸುತ್ತಮುತ್ತಲಿನ ಸ್ಥಳೀಯರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮಂಡಳಿಯ ಮಂಗಳೂರು ವಲಯ ಹಿರಿಯ ಪರಿಸರ ಅಧಿಕಾರಿ ರಾಜ ಶೇಖರ್ ಪುರಾಣಿಕ್ ಮಾತನಾಡಿ, ಆಸ್ಪತ್ರೆಯಲ್ಲಿ ಒಂದು ಬೆಡ್‌ನಿಂದ ದಿನಕ್ಕೆ 500ಗ್ರಾಂನಿಂದ 1.5ಕೆ.ಜಿ.ಯಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆದರೆ ಆಸ್ಪತ್ರೆಯವರು ಏಜೆನ್ಸಿಗಳಿಗೆ ನೀಡುವುದು ಕೇವಲ 50ಗ್ರಾಂ ತ್ಯಾಜ್ಯ ಮಾತ್ರ. ಇದರಿಂದ ತಿಳಿಯುವುದು ಬಹುತೇಕ ತ್ಯಾಜ್ಯವನ್ನು ಆಸ್ಪತ್ರೆಯವರೇ ವಿಲೇ ವಾರಿ ಮಾಡುತ್ತಿದ್ದಾರೆ ಎಂದು. ಅದೇ ರೀತಿ ಲ್ಯಾಬ್ ಮತ್ತು ಆಪರೇಷನ್ ಥಿಯೇಟರ್‌ನಲ್ಲಿ ಉತ್ಪದಾನೆಯಾಗುವ ದ್ರವ ತ್ಯಾಜ್ಯಗಳನ್ನು ಕೂಡ ಸರಿ ಯಾಗಿ ನಿರ್ವಹಿಸುತ್ತಿಲ್ಲ. ಇದು ಜನತೆಯ ಮೇಲೆ ಕೆಟ್ಟ ಪರಿಣಾಮ ಬೀರು ತ್ತದೆ ಎಂದು ಪುರಾಣಿಕ್ ಹೇಳಿದರು.

ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ. ಎಚ್.ಲಕ್ಷ್ಮೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿಯಲ್ಲಿ ಪ್ರತಿ ದಿನ ಸಂಗ್ರಹವಾಗುವ 60ಟನ್ ತ್ಯಾಜ್ಯಗಳಲ್ಲಿ ಶೇ.10ರಷ್ಟು ವೈದ್ಯಕೀಯ ತ್ಯಾಜ್ಯಗಳಿರುತ್ತದೆ. ಇವುಗಳನ್ನು ಸಾಮಾನ್ಯ ತ್ಯಾಜ್ಯಗಳೊಂದಿಗೆ ಎಸೆದರೆ ಅದರಲ್ಲಿರುವ ಸೂಕ್ಷ್ಮಣು ಜೀವಿಗಳು ಎಲ್ಲ ತ್ಯಾಜ್ಯಗಳಿಗೂ ವಿಸ್ತಾರ ಗೊಳ್ಳುತ್ತವೆ. ಇದರಿಂದ ಹಲವು ಸೊಂಕುಗಳು ಉತ್ಪತ್ತಿಯಾಗುತ್ತವೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಸ್ವಾಗತಿಸಿದರು. ಡಾ.ರಾಜಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News