ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ತುರವೇ ವತಿಯಿಂದ ಧರಣಿ
ಮಂಗಳೂರು, ಅ.6: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್‌ಪಡ್ಪು ಪ್ರದೇಶಕ್ಕೆ ಹೆಚ್ಚಿನ ಖಾಸಗಿ ಅಥವಾ ನರ್ಮ್ ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಬಜಾಲ್ ಪಡ್ಪು ಬಳಿ ಧರಣಿ ನಡೆಯಿತು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಬಜಾಲ್‌ಪಡ್ಪು ನಗರದಲ್ಲಿ ಸಾಕಷ್ಟು ಜನಸಂಖ್ಯೆ ಇದ್ದು ಹೆಚ್ಚಿನವರು ಬಸ್ ಸೌಲಭ್ಯ ಅವಲಂಬಿಸಿದ್ದಾರೆ. ಈ ಭಾಗದಲ್ಲಿರುವ ಬಸ್ ಸರಿಯಾಗಿ ಸಮಯ ಪರಿಪಾಲನೆ ಮಾಡದಿರುವುದರಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಸ್ಟೇಟ್‌ಬ್ಯಾಂಕ್‌ಗೆ ಹೋಗಬೇಕಾದರೆ ಕಂಕನಾಡಿಯಿಂದ ಇಳಿದು ಇನ್ನೊಂದು ಬಸ್ಸಿನಲ್ಲಿ ತೆರಳಬೇಕಾಗುತ್ತದೆ. ಈ ಪ್ರದೇಶದಲ್ಲಿ ಸರಕಾರಿ ಶಾಲೆ ಇದ್ದು ಇಲ್ಲಿಗೆ ಬರುವ ಮಕ್ಕಳು ಹಾಗೂ ಶಿಕ್ಷಕರು ಬಸ್ ಸಮಸ್ಯೆಯಿಂದ ಬವಣೆ ಪಡುವಂತಾಗಿದೆ. ಆದುದರಿಂದ ಈ ಪ್ರದೇಶಕ್ಕೆ ಹೆಚ್ಚುವರಿ ಖಾಸಗಿ ಹಾಗೂ ನರ್ಮ ಬಸ್‌ಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರಾದ ಜೆ. ಇಬ್ರಾಹೀಂ, ಪ್ರಶಾಂತ್ ಭಟ್ ಕಡಬ, ರಕ್ಷಿತ್ ಬಂಗೇರ ಕುಡುಪು, ಹರೀಶ್ ಶೆಟ್ಟಿ ಶಕ್ತಿನಗರ, ರಾಜೇಶ್ ಕುತ್ತಾರ್, ಶ್ರೀಕಾಂತ್ ಸಾಲ್ಯಾನ್, ಜನಾರ್ಧನ ಬೇಂಗ್ರೆ, ಆನಂದ್ ಅಮೀನ್ ಅಡ್ಯಾರ್, ನವಾಝ್ ಬಜಾಲ್, ಸಿರಾಜ್ ಅಡ್ಕರೆ, ಸ್ಥಳೀಯ ಮುಖಂಡರಾದ ರೆಹನ ಟೀಚರ್, ಅಬ್ದುರ್ರಝಾಕ್ ಬಜಾಲ್, ಉಸ್ಮಾನ್ ಕಲ್ಲಕಟ್ಟೆ, ರಾಜೇಶ್ ಉಪಸ್ಥಿತರಿದ್ದರು.