ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷ್ಪ್ರಯೋಜಕ: ಭಾರತ
Update: 2016-10-06 21:10 IST
ವಿಶ್ವಸಂಸ್ಥೆ, ಅ. 6: ಭಯೋತ್ಪಾದಕ ಸಂಘಟನೆಗಳೆಂದು ತಾನೇ ಘೋಷಿಸುವ ಸಂಘಟನೆಗಳ ನಾಯಕರನ್ನು ಭಯೋತ್ಪಾದಕರೆಂದು ಘೋಷಿಸಲು ಸಾಧ್ಯವಾಗದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷ್ಕ್ರಿಯತೆಯನ್ನು ಭಾರತ ಟೀಕಿಸಿದೆ.
ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ಭಯೋತ್ಪಾದಕ ಎಂಬುದಾಗಿ ವಿಶ್ವಸಂಸ್ಥೆ ಘೋಷಿಸಬೇಕು ಎನ್ನುವ ಭಾರತದ ನಿರ್ಣಯಕ್ಕೆ ಚೀನಾ ತಡೆಯೊಡ್ಡಿದ ಬಳಿಕ ಭಾರತ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಂಡು ಬರುವ ಹೊಣೆಯನ್ನು ಹೊತ್ತ ವಿಶ್ವಸಂಸ್ಥೆಯ ‘ಪ್ರಧಾನ ಘಟಕ’ವಾಗಿರುವ 15 ದೇಶಗಳ ಭದ್ರತಾ ಮಂಡಳಿಯು ಹಲವು ರೀತಿಗಳಲ್ಲಿ ನಮ್ಮ ಕಾಲದ ಅಗತ್ಯಗಳಿಗೆ ಸ್ಪಂದಿಸುತ್ತಿಲ್ಲ ಹಾಗೂ ತಾನು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವಲ್ಲಿ ಅದು ನಿಷ್ಪ್ರಯೋಜಕವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಹೇಳಿದರು.