ವಿದ್ಯುತ್ ಆಘಾತಕ್ಕೆ ಬಲಿಯಾದ ಕೋತಿಯ ಅಂತ್ಯಸಂಸ್ಕಾರ

Update: 2016-10-06 15:42 GMT

ಉಡುಪಿ, ಅ.6: ಉಡುಪಿಯ ತ್ರಿವೇಣಿ ಸರ್ಕಲ್ ಬಳಿ ಗುರುವಾರ ಮಧ್ಯಾಹ್ನ ವೇಳೆ ವಿದ್ಯುತ್ ಆಘಾತಕ್ಕೆ ಬಲಿಯಾದ ಕೋತಿಯ ಅಂತ್ಯ ಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಆದಿಉಡುಪಿಯಲ್ಲಿರುವ ಉಡುಪಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ನೆರವೇರಿಸಲಾಯಿತು.

ಅಪರೂಪ ಎಂಬಂತೆ ಉಡುಪಿ ನಗರಕ್ಕೆ ಬಂದಿದ್ದ ಗಂಡು ಕೋತಿಯೊಂದು ವಿದ್ಯುತ್ ಕಂಬ ಏರಿ ತಂತಿಯ ಮೇಲೆ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗ ಮಿಸಿದ ನಿತ್ಯಾನಂದ ಒಳಕಾಡು ಕೋತಿಯ ಮೃತದೇಹವನ್ನು ಬಿಳಿ ಬಟ್ಟೆಯಲ್ಲಿ ಇರಿಸಿ ಹೂವು ಮಾಲೆ ಹಾಕಿ ನಂತರ ತನ್ನ ಅಂಬ್ಯುಲೆನ್ಸ್‌ನಲ್ಲಿ ಆದಿಉಡುಪಿ ಯಲ್ಲಿರುವ ವಲಯ ಅರಣ್ಯ ಕಚೇರಿಗೆ ತೆಗೆದುಕೊಂಡು ಹೋದರು. ಈ ವೇಳೆ ಸಾರ್ವಜನಿಕರು ದೇಣಿಗೆ ನೀಡಿ ಮೃತ ಕೋತಿ ಗೌರವ ಅರ್ಪಿಸಿದರು.

ಬಳಿಕ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ, ಅರಣ್ಯ ರಕ್ಷಕ ದೇವರಾಜ ಪಾಣ ಸಮ್ಮುಖದಲ್ಲಿ ಕೋತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ‘ಸಾರ್ವಜನಿಕರಿಂದ ಸಂಗ್ರಹವಾದ ಹಣವನ್ನು ಮುಖ್ಯಪ್ರಾಣ ಗುಡಿಯ ಕಾಣಿಕೆ ಡಬ್ಬಿಗೆ ಹಾಕಲಾಗುವುದು’ ಎಂದು ನಿತ್ಯಾ ನಂದ ಒಳಕಾಡು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News