ದ.ಕ. ಜಿಲ್ಲಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಬರ್ಕಾಸ್ತು

Update: 2016-10-06 16:01 GMT

ಮಂಗಳೂರು, ಅ.6: ಬಿ.ಬಿ.ಆಲಾಬಿ ರಸ್ತೆಯ ಝುಲೇಖಾ ಸಂಕೀರ್ಣದಲ್ಲಿ 25 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದು ಕಾರ್ಯಾಚರಿಸುತ್ತಿದ್ದ ದ.ಕ. ಜಿಲ್ಲಾ ಮುಸ್ಲಿಮ್‌ವೆಲ್ಫೇರ್ ಅಸೋಸಿಯೇಶನ್ ಇಂದು ನಗರದ ಮುಸ್ಲಿಮ್ ಸೆಂಟ್ರಲ್ ಕಮಿಟಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬರ್ಕಾಸ್ತುಗೊಳಿಸಿ ಅದರ ಸ್ಥಿರಾಸ್ತಿಯನ್ನು ಬೈಲಾದಂತೆ ವಿತರಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್, ಜಿಲ್ಲೆಯ ಅನಿವಾಸಿ ಭಾರತೀಯರು ಮಂಗಳೂರಿನಲ್ಲಿ ವೆಲ್ಫೇರ್ ಅಸೋಸಿಯೇಶನ್‌ನ್ನು ಸ್ಥಾಪಿಸಿ ತಾವು ದುಡಿದ ಹಣದ ಒಂದಂಶವನ್ನು ಬಡವರಿಗೆ ಮೀಸಲಿಡುವ ಮೂಲಕ ಸಮಾಜದ ಕಷ್ಟದಲ್ಲೂ ಪಾಲ್ಗೊಂಡಿದ್ದಾರೆ. ಅವರು ಸ್ಥಾಪಿಸಿದ ಸಂಘಟನೆಯು ಬರ್ಖಾಸ್ತುಗೊಂಡು ಸ್ಥಿರಾಸ್ತಿಯು ಹಸ್ತಾಂತರಗೊಂಡಿದೆ ಎಂದು ವಿವರಿಸಿದರು.

ಅಸೋಸಿಯೇಶನ್‌ನ ಸ್ಥಿರಾಸ್ತಿಗಳಾದ ಎರಡು ಅಂಗಡಿಗಳ ದಾಖಲೆ ಪತ್ರಗಳನ್ನು ಹಸ್ತಾಂತರಿಸಲಾಯಿತು. ಅವುಗಳಲ್ಲಿ ಸುಮಾರು 25 ಲಕ್ಷ ರೂ. ವೌಲ್ಯದ ಮಳಿಗೆಯನ್ನು ಖಾಝಿ ನೇತೃತ್ವದಲ್ಲಿ ನಡೆಸಲ್ಪಡುತ್ತಿರುವ ಮೂಡುಬಿದಿರೆ ಕಾಶಿಪಟ್ನದ ದಾರುನ್ನೂರ್ ಎಜುಕೇಶನ್ ಸೆಂಟರ್‌ಗೆ ಹಾಗೂ 15 ಲಕ್ಷ ರೂ. ವೌಲ್ಯದ ಇನ್ನೊಂದು ಮಳಿಗೆಯನ್ನು ಮೂಳೂರಿನ ಸುನ್ನೀ ಸೆಂಟರ್‌ನ ಅನಾಥ ಮಕ್ಕಳ ಪೋಷಣೆಗಾಗಿ ಹಸ್ತಾಂತರಿಸಲಾಯಿತು. ಸಂಸ್ಥೆಯಲ್ಲಿದ್ದ 4.5 ಲಕ್ಷ ರೂ. ನಗದನ್ನು ಬಡಮಕ್ಕಳ ವಿವಾಹಕ್ಕಾಗಿ ವಿತರಿಸಲಾಯಿತು. ಅಸೋಸಿಯೇಶನ್‌ಗೆ ಬಂದ ಅರ್ಜಿಗಳಲ್ಲಿ 15 ಬಡವರಿಗೆ ತಲಾ 30 ಸಾವಿರ ರೂ.ನಂತೆ ಈ ಮೊತ್ತವನ್ನು ವಿತರಿಸಲಾಯಿತು.

ದಾರುನ್ನೂರ್ ಎಜುಕೇಶನ್ ಸೆಂಟರ್ ಪರವಾಗಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಹಾಗೂ ಸುನ್ನೀ ಸೆಂಟರ್ ಪರವಾಗಿ ಸೈಯದ್ ಮುಖ್ತಾರ್ ತಂಙಳ್‌ದಾಖಲೆಪತ್ರವನ್ನು ಸ್ವೀಕರಿಸಿದರು.

ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ಅಸೋಸಿಯೇಶನ್‌ಗೆ ಕಚೇರಿಯನ್ನು ಒದಗಿಸಿದ ಹಾಜಿ ಹಮೀದ್ ಕಂದಕ್, ಅಸೋಸಿಯೇಶನ್‌ನ ಅಧ್ಯಕ್ಷ ಇಬ್ರಾಹೀಂ ಬೊಳ್ಮಾರ್, ಸುನ್ನಿ ಸೆಂಟರ್‌ನ ಉಪಾಧ್ಯಕ್ಷ ಬದ್ರುದ್ದೀನ್, ಕಾಶಿಪಟ್ನ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ಕಾರ್ಯದರ್ಶಿ ಹನೀಫ್ ಹಾಜಿ, ಅಬ್ದುಲ್ಲತೀಫ್ ಮದರ್ ಇಂಡಿಯಾ, ಅಸೋಸಿಯೇಶನ್‌ನ ಕೋಶಾಧಿಕಾರಿ ಚಾಯಬ್ಬ ಜೋಕಟ್ಟೆ, ಅದ್ದು ಹಾಜಿ ಸೆಂಟ್ರಲ್ ಮಾರ್ಕೆಟ್ ಮತ್ತಿತರರು ಉಪಸ್ಥಿತರಿದ್ದರು.

ಬೆಳ್ಳಿಹಬ್ಬದ ಸಂಭ್ರಮದಲ್ಲಿತ್ತು...!

ಪ್ರಾಸ್ತಾವಿಕವಾಗಿ ಮಾತನಾಡಿದ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಕೆ.ಪಿ., 1992ರಲ್ಲಿ ಸ್ಥಾಪನೆಗೊಂಡ ದ.ಕ. ಜಿಲ್ಲಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವಾಗಲೇ ವಿಸರ್ಜನೆಯಾಗುತ್ತಿರುವುದು ಬೇಸರದ ಸಂಗತಿ. ಆದರೆ ಸಂಸ್ಥೆಯ ಸ್ಥಿರಾಸ್ತಿಗಳು ಸಂಸ್ಥೆಯ ಬೈಲಾದಂತೆ ಅದೇ ಉದ್ದೇಶಗಳಿಗೆ ಬಳಕೆಯಾಗಿರುವುದು ಸಂತೋಷವಾಗಿದೆ ಎಂದರು.

1991ರಲ್ಲಿ ದ.ಕ. ಜಿಲ್ಲೆಯ ಯುವಕರು ಸೌದಿಯ ಮದೀನಾ ಮುನವ್ವರದಲ್ಲಿ ಸೇರಿಕೊಂಡು ಒಂದು ಸಭೆ ನಡೆಸಿ ತಾವು ದುಡಿಯುವ ಹಣದ ಒಂದಂಶವನ್ನು ಬಡವರಿಗೆ ಮೀಸಲಿಡುವ ಬಗ್ಗೆ ನಿರ್ಣಯವೊದನ್ನು ಕೈಗೊಂಡಿದ್ದರು. ಅದರಂತೆ 1992ರಲ್ಲಿ ದ.ಕ. ಜಿಲ್ಲಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ನೋಂದಣಿಯಾಗಿತ್ತು. ಕ್ರಮೇಣ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸದಸ್ಯರು ಆ ರಾಷ್ಟ್ರವನ್ನು ತೊರೆದು ಇತರ ರಾಷ್ಟ್ರಕ್ಕೆ ಒಲವು ತೋರಿರುವುದು, ಕೆಲವು ಸದಸ್ಯರು ಸೌದಿಯಲ್ಲಿ ಉದ್ಯೋಗವನ್ನು ತ್ಯಜಿಸಿ ಊರಿಗೆ ಮರಳಿರುವುದು ಹಾಗೂ ಇತ್ತೀಚಿನ ವರ್ಷಗಳಲ್ಲಿ ಹಲವು ಸಂಘಟನೆಗಳು ಹುಟ್ಟಿಕೊಂಡಿರುವುದು ಸಂಸ್ಥೆಯ ವಿಸರ್ಜನೆಗೆ ಕಾರಣ ಎಂದವರು ತಿಳಿಸಿದರು.

ಬಡ ಹೆಣ್ಮಕ್ಕಳ ವಿವಾಹ ಕಾರ್ಯಕ್ರಮ, ಆರ್ಥಿಕವಾಗಿ ಹಿಂದುಳಿದವರು ವಿದ್ಯಾಭ್ಯಾಸ ಹಾಗೂ ಯತೀಂ ಮಕ್ಕಳ ಪೋಷಣೆಗಳಿಗೆ ನೆರವು ನೀಡಬೇಕೆಂಬ ಸದುದ್ದೇಶದಿಂದ ಸಂಸ್ಥೆ ಸ್ಥಾಪನೆಯಾಗಿತ್ತು. ಅದರಂತೆ ಬೈಲಾ ಕೂಡ ರಚಿಸಲಾಗಿತ್ತು. ಇತ್ತೀಚೆಗೆ ಸಂಸ್ಥೆಯ ಸದಸ್ಯರು ಮದೀನಾದಲ್ಲಿ ಸಭೆ ಸೇರಿ ಸಂಸ್ಥೆಯನ್ನು ಬರ್ಖಾಸ್ತುಗೊಳಿಸಬೇಕೆಂಬ ನಿರ್ಣಯ ಕೈಗೊಂಡಿದೆ. ಬೈಲಾದಲ್ಲಿ ಸೂಚಿಸಿದಂತೆ ಸಂಸ್ಥೆಯಲ್ಲಿ ಸಂಗ್ರಹವಾಗಿರುವ ಹಣವನ್ನು ಸದಸ್ಯರು ಹಂಚದೆ ಸಂಸ್ಥೆಯ ಧ್ಯೇಯೋದ್ದೇಶವನ್ನು ಹೊಂದಿರುವ ಇತರ ಸಂಸ್ಥೆಗಳಿಗೆ ಸ್ಥಿರಾಸ್ತಿ ಹಸ್ತಾಂತರಿಸುವಂತೆಯೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸರಳ ಕಾರ್ಯಕ್ರಮವನ್ನು ಏರ್ಪಡಿಸಿ ಸಂಸ್ಥೆಯ ಬೈಲಾದಂತೆ ಸ್ಥಿರಾಸ್ತಿ ಹಾಗೂ ಹಣವನ್ನು ವಿತರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News