ಕಾಪು: ಎಸ್‌ಡಿಪಿಐನಿಂದ ಜಾತ್ಯತೀತ ಇಂಡಿಯಾ ಸಮಾವೇಶ

Update: 2016-10-07 11:46 GMT

ಕಾಪು, ಅ.7: ಗೋಮಾಂಸದ ಬಗ್ಗೆ ದೇಶದಲ್ಲಿ ಗೊಂದಲ ಸೃಷ್ಟಿ ಮಾಡುವ ಸಂಘಪರಿವಾರದ ಸಂಘಟನೆಗಳು ಮುಸ್ಲಿಮರ ಹೆಸರಿಟ್ಟುಕೊಂಡು ಗೋಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತಿವೆ. ಮೊದಲು ಈ ಕಂಪೆನಿಯನ್ನು ನಿಲ್ಲಿಸಿ ವಿದೇಶಗಳಿಗೆ ಗೋಮಾಂಸ ರಫ್ತಾಗುವುದನ್ನು ನಿಲ್ಲಿಸಲಿ ಎಂದು ಎಸ್‌ಡಿಪಿಐ ಮುಖಂಡ ಅಶ್ರಫ್ ಎ.ಕೆ. ಸವಾಲೆಸೆದಿದ್ದಾರೆ.

ಅವರು ಕಾಪು ಪೇಟೆಯಲ್ಲಿ ಗುರುವಾರ ಸಂಜೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಾತ್ಯತೀತತೆಯೇ ಇಂಡಿಯಾದ ಜೀವ ಎಂಬ ಜಾತ್ಯತೀತ ಇಂಡಿಯಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಗೋಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುವ ಸಂಘಪರಿವಾರ ಹಾಗೂ ಬಿಜೆಪಿಗೆ ಗೋಹತ್ಯೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ದನ ಸಾಗಾಟದ ಹೆಸರಿನಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆ ನಡೆಸುವ ಸಂಘಪರಿವಾರಕ್ಕೆ ಗೋವಿನ ಮೇಲೆ ನಿಜವಾದ ಪ್ರೀತಿ ಇಲ್ಲ ಎಂದರು. ಶೇ.31 ಮತಗಳನ್ನು ಪಡೆದ ನರೇಂದ್ರ ಮೋದಿಯವರ ರಾಜಕೀಯ ತಂಡ ಈ ದೇಶದ ಜಾತ್ಯತಿತತೆಯನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಸದ್ಯ ರಾಷ್ಟ್ರವನ್ನು ಆಳುತ್ತಿರುವ ಕೆಂದ್ರ ಸರಕಾರದಿಂದ ಸಂವಿಧಾನದ ಮೂಲ ಆಶಯಕ್ಕೇ ದೊಡ್ಡ ಗಂಡಾಂತರ ಸೃಷ್ಟಿಯಾಗಿದೆ ಎಂದ ಅವರು, ಎಸ್‌ಡಿಪಿಐ ಭಯ ಮುಕ್ತ ಮತ್ತು ಹಸಿವು ಮುಕ್ತ ರಾಷ್ಟ್ರ ನಿರ್ಮಾಣದ ಕಲ್ಪನೆಯೊಂದಿಗೆ ಸಾಮಾಜಿಕ, ರಾಜಕೀಯ ಹೋರಾಟಕ್ಕೆ ಇಳಿದಿದೆ ಎಂದರು.

ವೇದಿಕೆಯಲ್ಲಿ ಸಂಘಟನೆಯ ಮುಖಂಡರಾದ ಜಲೀಲ್ ಕೃಷ್ಣಾಪುರ, ಇಲ್ಯಾಸ್ ಸಾಸ್ತಾನ, ಎ.ಕೆ ಅಶ್ರಫ್ ಅಲಿ,ಅಬೂಬಕರ್ ಪಾದೂರು,ಅಬೂಬಕರ್ ಕಾಪು, ಹನೀಫ್ ಮೂಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News