×
Ad

ಬದಿಯಡ್ಕ ಗ್ರಾ.ಪಂ. ಕಾರ್ಯದರ್ಶಿ ಸಹಿತ ಮೂವರ ಅಮಾನತು

Update: 2016-10-07 17:50 IST

ಕಾಸರಗೋಡು, ಅ.7: ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಅಕೌಂಟೆಂಟ್‌ನನ್ನು ಅಮಾನತುಗೊಳಿಸಲಾಗಿದೆ.

ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೂಫಿ, ಸಹಾಯಕ ಕಾರ್ಯದರ್ಶಿ ಪ್ರಮೋದ್, ಅಕೌಂಟೆಂಟ್ ಲತಿಕಾ ಅಮಾನತುಗೊಂಡ ಸಿಬ್ಬಂದಿ. ಚರ್ಲಡ್ಕ ಚೆಡೇಕಲ್ ರಸ್ತೆಯಲ್ಲಿ ಉದ್ಯೋಗ ಖಾತರಿಯೋಜನೆಗೆ ಸಂಬಂಧಿಸಿ ಚರಂಡಿ ನಿರ್ಮಿಸಲಾಗಿದೆ ಎಂದು ನಮೂದಿಸಿ ಹಣವನ್ನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಈ ಮೂವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ರಸ್ತೆ ಬದಿಯಲ್ಲಿ ಬೆಳೆದಿದ್ದ ಹುಲ್ಲನ್ನು ಉದ್ಯೋಗ ಖಾತರಿ ಕಾರ್ಮಿಕರ ಮೂಲಕ ತೆರವುಗೊಳಿಸಿದ್ದು, ಇದೇ ವೇಳೆ ದಾಖಲೆಯಲ್ಲಿ ಈ ರಸ್ತೆಯಲ್ಲಿ ಚರಂಡಿ ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಉದ್ಯೋಗ ಖಾತರಿ ಯೋಜನೆಯ ಹೆಸರಲ್ಲಿ ಪಂಚಾಯತನಲ್ಲಿ ನಡೆಯುವ ಅವ್ಯವಹಾರಗಳಿಗೆ ಸಂಬಂಧಿಸಿ ಚೆಡೇಕಲನ ಮುಹಮ್ಮದ್ ಕುಂಞಿ ನೀಡಿದ ದೂರಿನ ಮೇರೆಗೆ ಹಣಕಾಸು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಅವ್ಯವಹಾರವನ್ನು ಬೆಳಕಿಗೆ ತಂದಿದ್ದಾರೆ.

ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿ ಪಂಚಾಯತನಲ್ಲಿ ಮುಂದು ವರಿಯುತ್ತಿರುವ ಅವ್ಯವಹಾರಗಳ ಸೂತ್ರಧಾರ ಪಂಚಾಯತನ ಓರ್ವ ತಾತ್ಕಾಲಿಕ ನೌಕರನಾಗಿದ್ದಾನೆಂದೂ ಹೇಳಲಾಗುತ್ತಿದೆ. ಈ ಹಿಂದೆ ಪಂಚಾಯತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಯ ನಕಲಿ ಸಹಿಗಳನ್ನು ಉದ್ಯೋಗಖಾತರಿ ಯೋಜನೆಯ ಕಡತಗಳಲ್ಲಿ ಹಾಕಿರುವುದು ವಿವಾದಕ್ಕೆಡೆಯಾಗಿತ್ತು. ನಕಲಿ ಸಹಿ ಹಾಕಿದ ವ್ಯಕ್ತಿಯನ್ನು ಅಂದು ಪತ್ತೆಹಚ್ಚಿದ್ದರೂ ಆತನನ್ನು ರಕ್ಷಿಸಿ ಇತರ ಇಬ್ಬರು ತಾತ್ಕಾಲಿಕ ನೌಕರರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಆರೋಪ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News