ಸುಳ್ಯ ತಾಲೂಕು ಪ್ರಗತಿ ಪರಿಶೀಲನಾ ಸಭೆ: ಮೆಸ್ಕಾಂ, ಸರ್ವೇ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ತರಾಟೆ
ಸುಳ್ಯ, ಅ.7: ಸುಳ್ಯ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಪಂಚಾಯತ್‌ನ ಪಯಸ್ವಿನಿ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶುಭದಾ ಎಸ್ ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯನಿರ್ವಹಣಾದಿಕಾರಿ ಮಧುಕುಮರ್, ತಹಶೀಲ್ದಾರ್ ಎಂ.ಎಂ.ಗಣೇಶ್ ವೇದಿಕೆಯಲ್ಲಿದ್ದರು.
ಅಪಾಯಕಾರಿ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಸೂಚಿಸಿ ಮೂರು ತಿಂಗಳಾದರೂ ಮೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ರಾಧಾಕೃಷ್ಣ ಬೊಳ್ಳೂರು ಆಕ್ರೋಶ ವ್ಯಕ್ತಪಡಿಸಿದರು.
ಕೇನ್ಯ ಫೀಡರ್‌ನ ಲೈನ್ ಬದಲಾಯಿಸುವಾಗ ಕಾಲನಿಯ ಮನೆಯೊಂದರ ಸಂಪರ್ಕ ಕಡಿತಗೊಂಡಿದ್ದು ಅದನ್ನು ಮರು ಜೋಡಿಸಲು ಕಳೆದ ಸಭೆಯಲ್ಲಿ ಸೂಚಿಸಿದ್ದು, ಇನ್ನೂ ಸಂಪರ್ಕ ನೀಡಿಲ್ಲ ಎಂದು ಅಧ್ಯಕ್ಷರು ಅಧಿಕಾರಿ ಮೇಲೆ ಹರಿಹಾಯ್ದರು. ತಾಲೂಕು ಪಂಚಾಯತ್‌ಗೆ ಸೇರಿದ 8.6 ಎಕರೆ ಜಮೀನಿನ ಸರ್ವೇ ಮಾಡಿ ಗಡಿಗುರುತು ಮಾಡದೇ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ರಾಧಾಕೃಷ್ಣ ಬೊಳ್ಳೂರು ಆಕ್ಷೇಪಿಸಿದರು. ಇದು ಪೂರ್ತಿ ಅಭಿವೃದ್ಧಿ ಹೊಂದಿದ ಪ್ರದೇಶವಾಗಿದ್ದು, ನಕ್ಷೆ ಲಭ್ಯ ಇಲ್ಲದೆ ಇರುವುದರಿಂದ ಕಾಲಾವಕಾಶ ಬೇಕು ಎಂದು ಅಧಿಕಾರಿ ಉತ್ತರಿಸಿದರು.
ಈ ಕುರಿತು ವ್ಯಾಪಕ ಚರ್ಚೆ ನಡೆಯಿತು. ಶಾಲೆಗಳಲ್ಲಿ ಪೌಷ್ಠಿಕ ತೋಟ ನಿರ್ಮಣದ ಕುರಿತು ಶಿಕ್ಷಣ ಇಲಾಖೆ ಹಾಗೂ ಎನ್‌ಆರ್‌ಇಜಿ ಅಧಿಕಾರಿಗಳ ಅಂಕಿ ಸಂಖ್ಯೆ ತಾಳೆಯಾಗುತ್ತಿಲ್ಲ. ಶಾಲೆಗಳ ಪಟ್ಟಿ ನೀಡುವಂತೆ ಕಳೆದ ಸಭೆಯಲ್ಲಿ ಸೂಚಿಸಿದ್ದರೂ ಬಿಇಒ ಪಟ್ಟಿಯನ್ನೂ ನೀಡಿಲ್ಲ ಅಲ್ಲದೆ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಇಒ ಮಧುಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಸಿಆರ್‌ಪಿ ಪದ್ಮನಾಭ ಅತ್ಯಾಡಿ ಸಮಜಾಯಿಷಿ ನೀಡಿದರು.
ತಾಲೂಕು ಮಟ್ಟದ ಅಧಿಕಾರಿಗಳು ಕೆಡಿಪಿ ಸಭೆಗೆ ಕಡ್ಡಾಯವಾಗಿ ಹಾಜರಿರಬೇಕು. ಕಿರಿಯ ಅಧಿಕಾರಿಯನ್ನು ಕಳುಹಿಸುವುದಿದ್ದರೆ ಮೊದಲೇ ಅನುಮತಿ ಪಡೆಯಬೇಕು ಮತ್ತು ಸಭೆಗೆ ಬರುವ ಅಧಿಕಾರಿ ಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಇಒ ಮಧುಕುಮಾರ್ ಸೂಚಿಸಿದರು. ಮುಂದಿನ ಮೂರು ವರ್ಷಗಳನ್ನು ಗುರಿಯಾಗಿಟ್ಟು ಶಾಲೆ, ಅಂಗನವಾಡಿ, ರಸ್ತೆ ದುರಸ್ತಿಗೆ ಅನುದಾನಕ್ಕೆ ಅಂದಾಜು ಪಟ್ಟಿ ತಯಾರಿಸಿ ತಾಲೂಕು ಪಂಚಾಯತ್‌ಗೆ ನೀಡುವಂತೆ ಅವರು ಸೂಚಿಸಿದರು.
ಅಡ್ಪಂಗಾಯ ಶಾಲೆಯಲ್ಲಿ ಕೈತೋಟ ಮಾಡಲೇ ಇಲ್ಲ, ಕೊಳವೆ ಬಾವಿ ಕೆಟ್ಟು ಹೋಗಿದ್ದು, ದುರಸ್ತಿ ಮಾಡಿಲ್ಲ. ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪರಿಶೀಲಿಸಿದಾಗ ಈ ಎಲ್ಲಾ ಅಂಶಗಳು ಬಹಿರಂಗಗೊಂಡಿವೆ ಎಂದು ಇಒ ಶಿಕ್ಷಣಾಧಿಕಾರಿಗಳ ಮೇಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬೆಳ್ಳಾರೆ ಪೇಟೆಯ ಮಧ್ಯೆ ಇರುವ ಅಶ್ವತ್ಥ ಮರ ತೆರವುಗೊಳಿಸಲು ಸೂಚಿಸಿದ್ದರೂ ತೆರವು ಮಾಡದೇ ಇರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.