×
Ad

ಸಂಚಾರಕ್ಕೆ ಅಯೋಗ್ಯವಾದ ಕೈಕಂಬ-ಪರ್ಲ್ಯ, ಮದ್ದ ರಸ್ತೆ

Update: 2016-10-07 18:33 IST

ಬಂಟ್ವಾಳ, ಅ.6: ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್ ಕೈಕಂಬದಿಂದ ಪರ್ಲ್ಯ ಮತ್ತು ಕೈಕಂಬ ಮೀನುಮಾರುಕಟ್ಟೆಯಿಂದ ಮದ್ದ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವೆನಿಸಿದೆ. ಈ ಎರಡು ರಸ್ತೆಗಳು ಬಿ.ಸಿ.ರೋಡು ಕೈಕಂಬದ ಬಳಿಯಿಂದ ಹೆದ್ದಾರಿಯನ್ನು ಸೇರುತ್ತಿರುವುದರಿಂದ ಮಹತ್ವದ ರಸ್ತೆಯೂ ಹೌದು. ಕಿತ್ತುಹೋಗಿರುವ ಡಾಂಬರು, ಹೊಂಡ-ಗುಂಡಿಗಳಿಂದಾಗಿ ವಾಹನಗಳು ಹಾಗೂ ಪಾದಚಾರಿಗಳು ಓಡಾಡುವುದೂ ದುಸ್ತರ ಎನಿಸಿದೆ.

ಸುಮಾರು 1.5 ಕಿ.ಮೀ. ದೂರದ ಈ ರಸ್ತೆ ಕಳೆದ 2 ವರ್ಷಗಳಿಂದ ತೀರಾ ಕೆಟ್ಟ ಸ್ಥಿತಿಗೆ ಬಂದು ನಿಂತಿದೆ. ಈ ರಸ್ತೆಯು ಆಸ್ಪತ್ರೆ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಮಸೀದಿ, ಮಂದಿರಗಳನ್ನು ಸಂಪರ್ಕಿಸುತ್ತದೆ. ಬೃಹತ್ತಾದ ವಸತಿ ಪ್ರದೇಶವೂ ಹೌದು. ಹಾಗಾಗಿ ಈ ರಸ್ತೆ ದಿನನಿತ್ಯ ಸಂಚಾರ ಚಟುವಟಿಕೆಯಿಂದ ಕೂಡಿದೆ. ವಾಹನಗಳು, ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ದಿನನಿತ್ಯ ಇದೇ ರಸ್ತೆಯಲ್ಲಿ ಒಡಾಡುತ್ತಾರೆ. ಈ ಸಂದರ್ಭದಲ್ಲಿ ಎದುರಾಗುವ ಹೊಂಡಗುಂಡಿಗಳು ಆತಂಕವನ್ನುಂಟು ಮಾಡುತ್ತಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಬಿದ್ದರೆ ಕೆಸರ ನೀರಿನ ಸಿಂಚನ, ಬಿಸಿಲಾದರೆ ಧೂಳುಮಯಗೊಳ್ಳುವ ಈ ರಸ್ತೆ ತಾಲೂಕು ಕೇಂದ್ರವಾದ ಬಿ.ಸಿರೋಡ್‌ನಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದ ಕೈಕಂಬದಿಂದ ಪರ್ಲ್ಯ ಮತ್ತು ಮದ್ದಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಪುರಸಭೆಗೆ ಮತ್ತು ಸ್ಥಳೀಯ ಸದಸ್ಯರಿಗೆ ಮನವಿಯ ಮೇಲೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

15ನೆ ವಾರ್ಡ್‌ನ ಸದಸ್ಯೆ ಪುರಸಭೆಯ ಪ್ರಥಮ ಅವಧಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ 14ನೆ ವಾರ್ಡ್‌ನ ಸದಸ್ಯ ಪ್ರಸ್ತುತ ಅವಧಿಯ ಉಪಾಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರ ವಾರ್ಡ್‌ಗಳ ರಸ್ತೆಯ ಸ್ಥಿತಿಯೇ ಈ ರೀತಿ ಆದರೆ ಬೇರೆ ವಾರ್ಡ್‌ಗಳ ಸ್ಥಿತಿ ಹೇಗಿರಬೇಕು ಎಂದು ಸ್ಥಳೀಯ ಪ್ರಮುಖರಾದ ಶಾಹುಲ್ ಹಮೀದ್ ಎಸ್.ಎಚ್. ಪ್ರಶ್ನಿಸಿದ್ದಾರೆ. ಕಳೆದ ವರ್ಷದ ಮಳೆಗಾಲದಲ್ಲಿ ಸಾರ್ವಜನಿಕರ ನೆರವು ಪಡೆದು ಈ ರಸ್ತೆಯ ದುರಸ್ತಿ ಕಾರ್ಯ ನಡೆಸಿದರೂ ಪುರಸಭೆ ಎಚ್ಚರಗೊಂಡಿಲ್ಲ. ಕನಿಷ್ಠ ದುರಸ್ತಿ ಕಾರ್ಯವನ್ನೂ ನಡೆಸಿಲ್ಲ. ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಇಡಲು ಕ್ರಮಕೈಗೊಳ್ಳಲಾಗಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರಾದರೂ ಈವರೆಗೆ ಅದರ ಸುಳಿವೇ ಇಲ್ಲ. ಸಕಾಲದಲ್ಲಿ ಡಾಮರೀಕರಣ, ದುರಸ್ತಿ ಕಾರ್ಯ ನಡೆಸಿದಲ್ಲಿ ಹೀಗಾಗುತ್ತಿರಲಿಲ್ಲ ಎನ್ನುತ್ತಾರೆ ನಾಗರಿಕರು.

ಬಂಟ್ವಾಳ ಪುರಸಭಾ ವ್ಯಾಪ್ತಿಯ 14 ಮತ್ತು 15ನೆ ವಾರ್ಡ್‌ನ ಕೈಕಂಬದಿಂದ ಪರ್ಲ್ಯ ಮತ್ತು ಮದ್ದಕ್ಕೆ ಸಾಗುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದೆ. ಈ ಎರಡೂ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಹಲವು ವರ್ಷಗಳಿಂದ ಸ್ಥಳೀಯ ಸದಸ್ಯರಿಗೆ ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಈವರೆಗೆ ರಸ್ತೆಯ ಅಭಿವೃದ್ಧಿಗೆ ಯಾರೂ ಮುಂದಾಗಿಲ್ಲ. ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಕಳೆದ ತಿಂಗಳು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ರಸ್ತೆಯ ಅಭಿವೃದ್ಧಿಗೆ ಪುರಸಭೆಯಲ್ಲಿ ಹಣವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ತಿಳಿಸಿದ್ದಾರೆ. ಈ ಹೇಳಿಕೆ ಹಾಸ್ಯಸ್ಪದವಾಗಿದ್ದು ರಸ್ತೆಯ ಅಭಿವೃದ್ಧಿಗೆ ಪುರಸಭೆಯಲ್ಲಿ ಹಣವಿಲ್ಲದಿದ್ದರೆ ಊರಿನ ನಾಗರಿಕರು ಮತ್ತು ಆಟೊ ಚಾಲಕರಿಂದ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಲಾಗುವುದು.

- ಶಾಹುಲ್ ಹಮೀದ್ ಎಸ್.ಎಚ್., ಊರಿನ ಪ್ರಮುಖ

ಪರ್ಲ್ಯ ಮತ್ತು ಮದ್ದ ಬೃಹತ್ತಾದ ವಸತಿ ಪ್ರದೇಶವಾಗಿದ್ದು ಈ ಭಾಗಕ್ಕೆ ಬಾಡಿಗೆ ತೆರಳಲು ಹೆಚ್ಚಿನ ಆಟೊ ಚಾಲಕರು ನಿರಾಕರಿಸುತ್ತಾರೆ. ಸೇವೆಯ ದೃಷ್ಟಿಯಿಂದ ಕೆಲವು ಆಟೊ ಚಾಲಕರು ಬಾಡಿಗೆ ಹೋದರೂ ಸಿಗುವ ಬಾಡಿಗೆ ಹಣ ಪೆಟ್ರೋಲ್‌ಗೆ ಸಾಕಾಗುವುದಿಲ್ಲ. ಹೊಂಡ ಗುಂಡಿಯ ಈ ರಸ್ತೆಯಲ್ಲಿ ದಿನನಿತ್ಯ ಸಂಚಾರಿಸುವುದರಿಂದ ಆಟೊ ಚಾಲಕರ ಆರೋಗ್ಯ ಹದೆಗೆಡುತ್ತಿದೆ. ಹೆಚ್ಚಿನವರಲ್ಲಿ ಬೆನ್ನು, ಸೊಂಟ ನೋವು ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಆಟೊ ರಿಕ್ಷಾ ಕೂಡಾ ದುರಸ್ತಿಗೊಳಲಾಗುತ್ತಿದೆ. ಸಂಬಂಧಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರ್ಲ್ಯ ಮತ್ತು ಮದ್ದ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಆಟೊ ಚಾಲಕ ಮಾಲಕರ ಸಂಘದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು.

- ಯಾಕೂಬ್, ಆಟೊ ಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News