×
Ad

ಬೆಂಗಳೂರಿಗೆ ತಂತ್ರಜ್ಞಾನ ನೀಡುವುದು ಕರಾವಳಿಯ ಪ್ರತಿಭೆಗಳು: ಆಸ್ಕರ್

Update: 2016-10-07 20:03 IST

ಪಡುಬಿದ್ರೆ, ಅ.7: ಪ್ರಪಂಚದ ಸಿಲಿಕಾನ್ ವ್ಯಾಲಿ ಪ್ರಾರಂಭವಾಗಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿಗೆ ತಂತ್ರಜ್ಞಾನ ನೀಡುವುದು ಕರಾವಳಿಯ ಪ್ರತಿಭೆಗಳು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಶುಕ್ರವಾರ ಎರ್ಮಾಳಿನ ರಾಜೀವ್ ಗಾಂಧಿ ನ್ಯಾಷನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜುಕೇಶನ್‌ನಲ್ಲಿ ನಡೆದ ಇಂಡಿಯಾ ವಾಂಟ್ಸ್ ಟು ನೋ ಎಂಬ 3 ನಿಮಿಷದ ಟೆಲಿಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉಡುಪಿಯ ಯುವಜನತೆಯಲ್ಲಿರುವ ಪ್ರತಿಭೆಯಿಂದಾಗಿ ಉಡುಪಿಯನ್ನು ವಿಶ್ವದ ಭೂಪಟದಲ್ಲಿ ಅಗ್ರಮಾನ್ಯವಾಗಿ ಪರಿಗಣಿಸಲಾಗುತ್ತದೆ ಎಂದರು.

ಇಂದಿರಾ ಗಾಂಧಿ, ಅಂಬೇಡ್ಕರ್, ನೆಹರೂರಂತಹ ಅಗ್ರಮಾನ್ಯ ವ್ಯಕ್ತಿತ್ವಗಳ ವರ್ಷಾಚರಣೆಗಳು ಈ ಬಾರಿ ಸಂಗಮದಂತೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಸಿಕ್ಕಾಗ ತುತ್ತು ಅನ್ನ, ಗೇಣು ಬಟ್ಟೆ ಮತ್ತೊಂದು ಸೂರಿನ ಮೂಲಭೂತ ಬೇಡಿಕೆಗಳಿದ್ದು, ಮಹಾತ್ಮ ಗಾಂಧಿ ಸೇರಿ ಹಲವಾರು ಜನನಾಯಕರು ಈ ಬೇಡಿಕೆಗಳಿಗೆ ತಕ್ಕುದಾದ ಕಾರ್ಯ ಮಾಡುತ್ತಾ ಬಂದವರು. ಇಂದಿನ ಯುವಜನತೆ ಇವುಗಳನ್ನು ಸ್ಮರಿಸಬೇಕು. ಪರಿಶ್ರಮದಿಂದ, ಪ್ರತಿಭೆಗಳ ಸೂಕ್ತ ಬಳಕೆಯಿಂದ ಸಮಾಜದಲ್ಲಿ ಉನ್ನತ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಆಸ್ಕರ್ ಹೇಳಿದರು.

ಇಂಡಿಯಾ ವಾಂಟ್ಸ್ ಟು ನೋ ಸ್ಪರ್ಧೆಯ ಪ್ರಭಾವದ ಬಗ್ಗೆ ನಾಗೇಶ್ ರಾವ್ ವಿವರಿಸಿದರು.

ಪ್ರಶಸ್ತಿ ವಿಜೇತರು

ಭಾರತ ಸರಕಾರ ಸಮಾಜಿಕ ಕಳಕಳಿಯೊಂದಿಗೆ ಅಳವಡಿಸಿಕೊಂಡ ಜನೋಪಯುಕ್ತ ಕಾನೂನು ಮತ್ತು ಯೋಜನೆಗಳ ವಿಷಯದಲ್ಲಿ ನಡೆಸಲಾದ ಮೂರು ನಿಮಿಷಗಳ ವೀಡಿಯೊ ಸ್ಪರ್ಧೆಗೆ ಸುಮಾರು 127 ವೀಡಿಯೊಗಳು ಬಂದಿದ್ದು ಉತ್ತಮ 5 ವೀಡಿಯೊಗಳಿಗೆ ಪ್ರಸಸ್ತಿ ವಿತರಿಸಲಾಯಿತು. ಹರ್ಷಿಣಿ ಎಂ.ಜಿ. ಐದನೆ ಬಹುಮಾನ, ಮಂಜುನಾಥ್ ಎಚ್.ಎಸ್. ನಾಲ್ಕನೆ ಬಹುಮಾನ, ವಿಭಾ ಕೆ.ಆರ್. ಮೂರನೆ ಬಹುಮಾನ, ರೊಝಾರಿಯಾ ಎರಡನೆ ಬಹುಮಾನ ಮತ್ತು ಸೌರಭ್ ಆಚಾರ್ಯ ಹಾಗೂ ಕಾರ್ತಿಕ್ ಶೆಟ್ಟಿ 1 ಲಕ್ಷ ನಗದು ಸಹಿತ ಪ್ರಥಮ ಬಹುಮಾನ ಪಡೆದುಕೊಂಡರು. ಪ್ರಶಸ್ತಿ ವಿಜೇತ ಐದು ವೀಡಿಯೊಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ದಿ.ರವಿ ಕಾಂಚನ್‌ರ ಭಾವಚಿತ್ರಕ್ಕೆ ಪುಷ್ಪಾಂಜಲಿ ನಮನ ಸಲ್ಲಿಸಲಾಯಿತು.

ಎಂಎಲ್‌ಸಿ ಪ್ರತಾಪ್‌ಚಂದ್ರ ಶೆಟ್ಟಿ, ಎಂ.ಎ.ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಮೋಹನ್ ನಂಬಿಯಾರ್, ಮುರಳಿ ಶೆಟ್ಟಿ, ಅರುಣಾ ಕುಮಾರಿ, ಹರೀಶ್ ಕಿಣಿ, ಗಂಗಾಧರ ಸುವರ್ಣ, ದೀಪಕ್ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.

ರಾಜೀವ್ ಗಾಂಧಿ ನ್ಯಾಷನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜುಕೇಶನ್‌ನ ನಿರ್ದೇಶಕ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಪದ್ಮಕುಮಾರ್ ಮತ್ತು ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News