ಬಡವರ ಸೇವೆಯಿಂದ ದೇವರನ್ನು ಕಾಣೋಣ: ಕೇಮಾರು ಸ್ವಾಮೀಜಿ
ಮಂಗಳೂರು, ಅ. 8: ಸಾಮಾಜಿಕ ಶಾಂತಿ, ಸಹಬಾಳ್ವೆಗೆ ಶ್ರಮಿಸುವ ಜೊತೆಗೆ ಸಮಾಜದ ದುರ್ಬಲ ವರ್ಗದವರಿಗೆ ಸೇವೆ ಮಾಡುವ ಮೂಲಕ ದೇವರನ್ನು ಕಾಣಲು ಸಾಧ್ಯವಿದೆ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಇಂದು ಸಂಜೆ ನಗರದ ಪುರಭವನದಲ್ಲಿ ನಡೆದ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನ ಕಾರ್ಯಕ್ರಮದಲ್ಲಿ ‘ಸದ್ಭಾವನಾ ಸಮ್ಮಾನ್’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಎರಡು ಧರ್ಮಗಳ ನಡುವೆ ಎಂದೂ ಗಲಾಟೆಗಳು ಸಂಭವಿಸುವುದಿಲ್ಲ. ಆದರೆ, ಎರಡು ಅಧರ್ಮಗಳ ನಡುವೆ ಗಲಾಟೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹಿಂಸೆಯಿಂದ ಶಾಂತಿ ಸ್ಥಾಪನೆಯಾಗುವುದಿಲ್ಲ ಎಂಬುದನ್ನು ಸಮಾಜ ಅರಿತುಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.
ಪ್ರೀತಿಯ ದೀಪವನ್ನು ಹೊತ್ತಿಸುವ ಮೂಲಕ ಸಮಾಜದಲ್ಲಿ ಸೌಹಾರ್ದ ಮತು ಸಹೋದರತೆಯ ವಾತಾವರಣವನ್ನು ಸೃಷ್ಟಿಸೋಣ. ಈ ಮೂಲಕ ದ್ವೇಷವೆಂಬ ಬೆಂಕಿಯನ್ನು ನಂದಿಸೋಣ ಎಂದು ಕೇಮಾರು ಸ್ವಾಮೀಜಿ ನುಡಿದರು.
ನಾನು ಸನ್ಮಾನ ಸ್ವೀಕರಿಸುವವನಲ್ಲ. ನನ್ನ ಆಧ್ಯಾತ್ಮಿಕ ಬದುಕೇ ನನಗೆ ನಿಜವಾದ ಸನ್ಮಾನವಾಗಿದೆ. ಧಾರ್ಮಿಕ ಮತ್ತು ಆಧ್ಯಾತ್ಮ ಬದುಕಿನ ಹಾದಿಯೇ ನನಗೆ ಸನ್ಮಾನವಾಗಿದ್ದು, ಇದುವೇ ನನಗೆ ಸಂತೃಪ್ತಿಯನ್ನು ನೀಡಿದೆ ಎಂದರು.
‘ಸದ್ಭಾವನಾ ಸಮ್ಮಾನ್’ ಸ್ವೀಕರಿಸಿದ ಕ್ರೈಸ್ತ ಧರ್ಮ ಅಧ್ಯಯನ ಪೀಠದ ಮಾಜಿ ಅಧ್ಯಕ್ಷ ರೆ.ಫಾ.ಜಾನ್ ಫೆರ್ನಾಂಡಿಸ್ ಮಾತನಾಡಿ, ಸಹೋದರತೆ ಮತ್ತು ಸಹಬಾಳ್ವೆಯ ಕೆಲಸದಲ್ಲಿ ಎಲ್ಲರೂ ಕೈಜೋಡಿಸಿದರೆ ಗುರಿ ಮುಟ್ಟಲು ಸಾಧ್ಯವಿದೆ ಎಂದರು.
ಯುನಿಟಿ ಅಕಾಡಮಿ ಆಫ್ ಎಜುಕೇಶನ್‌ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಇದರ ಅಧ್ಯಕ್ಷ ಮುಹಮ್ಮದ್ ಕುಂಞಿ, ಶಾಂತಿ ಮತ್ತು ಮಾನವೀಯತೆ ಅಭಿಯಾನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಂಗಳೂರು ವಿವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಣ, ಉಳ್ಳಾಲ ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ನಗರ ಸಂಶೋಧನಾ ಕೇಂದ್ರದ ಪ್ರೊಜೆಕ್ಟ್ ಕೋ ಆರ್ಡಿನೇಟರ್ ಹರಿಣಿ, ಸ್ವಾಗತ ಸಮಿತಿಯ ಕಾರ್ಯದರ್ಶಿ ಉಮರ್ ಯು.ಎಚ್. ಉಪಸ್ಥಿತರಿದ್ದರು.