×
Ad

ಆರೋಗ್ಯ ಸೂಚ್ಯಂಕದಲ್ಲಿ ಜಿಲ್ಲೆ ದೇಶಕ್ಕೆ ಪ್ರಥಮ: ಪ್ರಮೋದ್

Update: 2016-10-07 21:55 IST

ಹೆಬ್ರಿ, ಅ.7: ಆರೋಗ್ಯ ಮತ್ತು ಶಿಕ್ಷಣ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ ಇವರ ವತಿಯಿಂದ ಹೆಬ್ರಿಯಲ್ಲಿ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತಿದ್ದರು.

ಆರೋಗ್ಯ ಸಮಸ್ಯೆಗಳಿಗೆ ಸಂಬಂದಪಟ್ಟಂತೆ ಸರಕಾರಿ ಆಸ್ಪತ್ರೆಗಳಿಗೆ ಆರ್ಥಿಕವಾಗಿ ಹಿಂದುಳಿದ ಜನತೆ ಆಗಮಿಸುತ್ತಿದ್ದು, ಅಗಮಿಸುವ ಜನತೆಗೆ ಉತ್ತಮ ರೀತಿಯ ಸೇವೆಯನ್ನು ನೀಡುವಂತೆ ಸೂಚಿಸಿದ ಸಚಿವರು,. 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಮುದಾಯ ಕೇಂದ್ರದಲ್ಲಿ 45 ಸಿಬ್ಬಂದಿ ಗಳು ಕಾರ್ಯ ನಿರ್ವಹಿಸಬೇಕಾಗಿದ್ದು, ಪ್ರಸ್ತುತ 24 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 21 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, ಕಾರ್ಕಳದ ತಾಲೂಕು ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಲು 6 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಆಗಿದೆ. ಹೆಬ್ರಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಎಲ್ಲಾ ರೀತಿಯಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ. ಹೆಬ್ರಿಯಲ್ಲಿ ಈ ಹಿಂದೆ ಇದ್ದ ಆಸ್ಪತ್ರೆ ಜಾಗವನ್ನು ವ್ಯವಸ್ಥಿತ ರೀತಿಯ ಬಸ್ ನಿಲ್ದಾಣವನ್ನಾಗಿ ಮಾಡಲು ಚಿಂತನೆ ನಡೆಸಲಾ ಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಹೆಬ್ರಿ ಗ್ರಾಪಂ ಅಧ್ಯಕ್ಷ ಸುಧಾಕರ ಹೆಗ್ಡೆ, ಜಿಪಂ ಸದಸ್ಯ ಜ್ಯೋತಿ ಹರೀಶ್, ಕಾರ್ಕಳ ತಾಪಂ ಸದಸ್ಯ ಚಂದ್ರಶೇಖರ ಶೆಟ್ಟಿ, ಅಮೃತ್‌ಕುಮಾರ್ ಶೆಟ್ಟಿ, ಲಕ್ಷ್ಮಿ ದಯಾನಂದ, ರಮೇಶ್ ಪೂಜಾರಿ, ನಾಡ್ಪಾಲು ಗ್ರಾಪಂ ಅಧ್ಯಕ್ಷ ಜಲಜಾ ಪೂಜಾರ್ತಿ, ಮುದ್ರಾಡಿ ಗ್ರಾಪಂ ಅಧ್ಯಕ್ಷ ಶಶಿಕಲಾ ಡಿ.ಪೂಜಾರಿ, ಶಿವಪುರ ಗ್ರಾಪಂ ಅಧ್ಯಕ್ಷ ಸುಗಂಧಿ ನ್‌ಕಾ , ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿದರು. ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಡಾ. ನರಸಿಂಹ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News