ಪ್ರಪ್ರಥಮ ಹ್ಯೂಗೋ ಚಾವೆಜ್ಝ್ ಶಾಂತಿ ಪ್ರಶಸ್ತಿ ಘೋಷಣೆ
►ಶಾಂತಿ ನೊಬೆಲ್ ಪ್ರಕಟವಾದಂದೇ ಇದರ ಘೋಷಣೆ
ವೆನೆಜುವೆಲಾ, ಅ.8: ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ಶುಕ್ರವಾರದಂದೇ ಮತ್ತೊಂದು ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಘೋಷಿಸಿದ್ದಾರೆ.
ದಿವಂಗತ ಸಮಾಜವಾದಿ ಮುಖಂಡ ಹ್ಯೂಗೊ ಚಾವೆಜ್ಝ್ ಸ್ಮರಣಾರ್ಥ ಸ್ಥಾಪಿಸಲಾದ ಪ್ರಪ್ರಥಮ ಶಾಂತಿ ಪ್ರಶಸ್ತಿಯನ್ನು ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ನೀಡಲು ನಿರ್ಧರಿಸಲಾಗಿದೆ ಎಂದು ನಿಕೊಲಸ್ ಘೋಷಿಸಿದರು.
ನೆರೆಯ ಕೊಲಂಬಿಯಾದ ಅಧ್ಯಕ್ಷ ಜುಯಾನ್ ಮ್ಯಾನುಯೆಲ್ ಸ್ಯಾಂಟೊಸ್ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ ದಿನವೇ ವೆನೆಜುವೆಲಾ ತನ್ನ ದೇಶದ ಮಹಾನ್ ನಾಯಕನ ಹೆಸರಲ್ಲಿ ಹೊಸ ಶಾಂತಿ ಪ್ರಶಸ್ತಿ ಸ್ಥಾಪಿಸಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದೆ.
‘‘ ಶಾಂತಿ ಹಾಗೂ ಸಾರ್ವಭೌಮತ್ವಕ್ಕಾಗಿ ನಾವು ಹ್ಯೂಗೂ ಚಾವೆಜ್ಝ್ ಪ್ರಶಸ್ತಿ ಸ್ಥಾಪಿಸಲು ನಿರ್ಧರಿಸಿದೆವು. ನನ್ನ ಪ್ರಕಾರ ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಈ ಪ್ರಶಸ್ತಿಗೆ ಅರ್ಹ ವ್ಯಕ್ತಿಯಾಗಿದ್ದಾರೆ. ಪುತಿನ್ ಶಾಂತಿಗಾಗಿ ಹೋರಾಟ ನಡೆಸುತ್ತಿರುವ ಧೀಮಂತ ನಾಯಕ’’ ಎಂದು ಮಡುರೊ ಬಣ್ಣಿಸಿದ್ದಾರೆ.
‘‘ಹ್ಯೂಗೋ ಚಾವೆಜ್ಝ್ ಶಾಂತಿ ಪ್ರಶಸ್ತಿ ವಿಜೇತರು ವರ್ಣರಂಜಿತ ಪ್ರತಿಮೆಯನ್ನು ಸ್ವೀಕರಿಸಲಿದ್ದಾರೆ’’ ಎಂದು ರಶ್ಯ ಕಲಾಕಾರ ವಿನ್ಯಾಸಗೊಳಿಸಿರುವ ಚಾವೆಜ್ಝ್ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಡುರೊ ತಿಳಿಸಿದ್ದಾರೆ.
ಚಾವೆಜ್ಝ್ ಅವರ 14 ವರ್ಷಗಳ ಆಡಳಿತಾವಧಿಯಲ್ಲಿ ವೆನೆಜುವೆಲಾ ತನ್ನ ವಲಯದಲ್ಲಿ ವಾಷಿಂಗ್ಟನ್‌ನ ಪ್ರಾಬಲ್ಯಕ್ಕೆ ಬಹಿರಂಗವಾಗಿ ಸವಾಲೊಡ್ಡಿತ್ತು. ಯುನೈಟೆಡ್ ಸ್ಟೇಟ್ಸ್‌ನ ಸಾಂಪ್ರದಾಯಿಕ ಎದುರಾಳಿಗಳಾದ ರಶ್ಯ ಹಾಗೂ ಚೀನಾ ದೇಶಗಳ ಮೈತ್ರಿಗಾಗಿ ಸ್ನೇಹ ಸೇತು ನಿರ್ಮಿಸಿತ್ತು.