ಮಾರಕಾಸ್ತ್ರ ಝಳಪಿಸಿ ಎಎಸ್ಸೈಯಿಂದ ಕೃಷಿನಾಶ, ಜೀವಬೆದರಿಕೆ: ಎಸ್ಪಿಗೆ ದೂರು
ವಿಟ್ಲ, ಅ.8: ಬಂಟ್ವಾಳ ಗ್ರಾಮಾಂತರ ಠಾಣೆಯ ಎಎಸ್ಸೈ ಓರ್ವರು ಇತರರ ಜಮೀನಿಗೆ ನುಗ್ಗಿ ಮಾರಕಾಸ್ತ್ರ ಝಳಪಿಸಿ ವೃದ್ಧ ಹಾಗೂ ವಿಧವೆ ಮಹಿಳೆಯನ್ನು ಬೆದರಿಸಿದ್ದಲ್ಲದೆ ಜಮೀನಿನಲ್ಲಿದ್ದ ಕೃಷಿ ನಾಶಗೈದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಪೆರಾಜೆ ಗ್ರಾಮದ ದೆಪ್ಪೊಳಿಗೆ ಎಂಬಲ್ಲಿ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯ ಎಎಸ್ಸೈ, ಪೆರಾಜೆ ಗ್ರಾಮದ ದೆಪ್ಪೊಳಿ ನಿವಾಸಿ ರುಕ್ಮಯ ಗೌಡ (32) ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು 10-15 ಸೆಂಟ್ಸ್ ಜಮೀನು ಹೊಂದಿರುವ ಪಂಚಾಯತ್ ಸದಸ್ಯೆ ವಿಧವೆ ಮೋಹಿನಿ, ವೃದ್ಧ ಪರಮೇಶ್ವರ ನಾಯ್ಕ ಹಾಗೂ ಚಾಲಕ ವೃತ್ತಿಯ ಆದಂ ಎಂಬವರ ಹಿತ್ತಲಲ್ಲಿದ್ದ ತೆಂಗಿನ ಗಿಡಗಳು, ಬಾಳೆ ಗಿಡಗಳನ್ನು ರುಕ್ಮಯ ಗೌಡ ನಾಶಮಾಡಿದ್ದಾರೆ ಎನ್ನಲಾಗಿದೆ.
‘‘ಅ.4 ರಂದು ಸಂಜೆ ಮದ್ಯ ಸೇವಿಸಿ ತನ್ನ ಪತ್ನಿಯೊಂದಿಗೆ ಕೈಯಲ್ಲಿ ತಲವಾರು ಝಳಪಿಸುತ್ತಾ ಬಂದ ಎಎಸ್ಸೈ ರುಕ್ಮಯ ಗೌಡ ಈ ಬಡ ಕುಟುಂಬಗಳ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ವೃದ್ಧ ಪರಮೇಶ್ವರ ನಾಯ್ಕ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ತಡೆಯಲು ಬಂದ ವಿಧವೆ ಮೋಹಿನಿ ಮೇಲೂ ಈತ ದೈಹಿಕ ಹಲ್ಲೆಗೆ ಮುಂದಾಗಿದ್ದಾನೆ’’. ಇಷ್ಟೇ ಅಲ್ಲದೆ ’’ತಾಕತ್ತಿದ್ದರೆ ನನ್ನ ಮೇಲೆ ದೂರು ನೀಡಿ. ಮನೆಗೆ ಬೆಂಕಿ ಹಾಕಿ ನಿಮ್ಮನ್ನೆಲ್ಲಾ ಸುಟ್ಟು ಹಾಕುತ್ತೇನೆ’’ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ. ಘಟನೆಯ ವೀಡಿಯೊ ತುಣುಕುಗಳ ಹಾಗೂ ಭಾವಚಿತ್ರ ಸಹಿತ ಜಿಲ್ಲಾ ಎಸ್ಪಿಗೆ ದೂರು ನೀಡಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಪರಮೇಶ್ವರ ನಾಯ್ಕರನ್ನು ಮಂಗಳೂರು ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 5 ರಂದು ಕೂಡಾ ಇದೇ ರುಕ್ಮಯ ಅದೇ ಪರಿಸರದ ವೃದ್ಧ ಶಿವಪ್ಪ ಪೂಜಾರಿಯವರ ಮೇಲೆ ಹಲ್ಲೆ ನಡೆಸಿದ್ದು, ಆ ಸಮಯ ಗಾಯಾಳು ವಿಟ್ಲ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸರಿಯಾದ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.